ಅರಕಲಗೂಡು: ವಿಧಾನಸಭೆ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಪಟ್ಟಣದ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಸ್ಥಾಪಿಸಿರುವ ಸ್ಟ್ರಾಂಗ್ ರೂಮ್ ಅನ್ನು ಜಿಲ್ಲಾಧಿಕಾರಿ ಅರ್ಚನಾ ಪರಿಶೀಲಿಸಿದರು.
ಮತ ಎಣಿಕೆ ಹಾಗೂ ಮತಯಂತ್ರಗಳ ಸುರಕ್ಷತೆ ಹಾಗೂ ಭದ್ರತೆ ಸಂಬಂಧ ಸ್ಟ್ರಾಂಗ್ ರೂಮ್ ನಿರ್ಮಾಣಕ್ಕೆ ಬೇಕಾಗುವ ಸೌಲಭ್ಯ ಹಾಗೂ ಇತರೆ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಅವರು, ಮತಯಂತ್ರಗಳನ್ನು ಸ್ಟ್ರಾಂಗ್ ರೂಮ್ ಗೆ ನೀಡುತ್ತಿರುವ ಹಿನ್ನೆಲೆ ಏನೆಲ್ಲಾ ವ್ಯವಸ್ಥೆ ಮಾಡಿಕೊಂಡಿದ್ದಾರೆಂದು ಪರಿಶೀಲಿಸಲು ಬಂದಿದ್ದೆ, ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇಲ್ಲಿಯೇ ತರಬೇತಿಯನ್ನು ನೀಡಲಾಗುತ್ತದೆ ಎಂದರು.
ಜಿಲ್ಲೆಯಲ್ಲಿ 33 ಚೆಕ್ ಪೋಸ್ಟ್ ಗಳನ್ನು ಹಾಕಿದ್ದು, ಅರಕಲಗೂಡಿನಲ್ಲಿ ನಗದು ಹಣ ಸೀಜ್ ಮಾಡಿದ್ದು, 20 ಲಕ್ಷ ರೂ. ಮೌಲ್ಯದ 9883 ಲೀಟರ್ ಮದ್ಯ, 144 ಗ್ರಾಂ ಗಾಂಜಾ, 44 ಲಕ್ಷ ರೂ. ಮೌಲ್ಯದ ವಿವಿಧ ದಾಸ್ತಾನು ವಶಪಡಿಸಿಕೊಂಡಿದ್ದು, 66 ಎಫ್‌ಐಆರ್ ದಾಖಲಾಗಿದೆ ಎಂದರು.
ಜಿಲ್ಲೆಯಲ್ಲಿ ಹೊಸದಾಗಿ 68 ಸಾವಿರ ಮತದಾರರು ಸೇರ್ಪಡೆಯಾಗಿದ್ದು, ಈಗಾಗಲೇ ಗುರುತಿನ ಚೀಟಿಗಳು ಕೆಲವರಿಗೆ ಸಿಕ್ಕಿವೆ. ಇನ್ನು ಕೆಲವರಿಗೆ ಸಿಕ್ಕಿಲ್ಲ. ಮತದಾನ ಗುರುತಿನ ಚೀಟಿ ಇಲ್ಲದಿದ್ದರೂ ಮತದಾರರು ಪಟ್ಟಿಯಲ್ಲಿದ್ದಾರೆ. ಇತರೆ ದಾಖಲಾತಿಗಳನ್ನು ನೀಡಿ ಮತ ಹಾಕಬಹುದು ಎಂದರು.
ಚುನಾವಣಾಧಿಕಾರಿ ಸುರೇಶ್, ತಹಶೀಲ್ದಾರ ಬಸವರೆಡ್ಡಪ್ಪ ರೋಣದ, ನೊಡಲ್ ಅಧಿಕಾರಿ ಮಾರುತಿ, ಕಂದಾಯ ನಿರೀಕ್ಷಕ ಕೆ.ಎಸ್. ಲೋಕೇಶ್, ಪ.ಪಂ ಮುಖ್ಯಾಧಿಕಾರಿ ಶಿವಕುಮಾರ, ಆರೋಗ್ಯ ನಿರೀಕ್ಷಕ ಮಂಜುನಾಥ ಇದ್ದರು.