ಚನ್ನರಾಯಪಟ್ಟಣ: ಸರಕಾರದ ವತಿಯಿಂದ ನಪೆಡ್ ಕೊಬ್ಬರಿಯನ್ನು ತೆಗೆದುಕೊಳ್ಳುವುದಕ್ಕೆ ಸರಕಾರ ಆದೇಶವಿದ್ದರೂ ರೈತರು ಕೊಬ್ಬರಿಯನ್ನು ನಪೆಡ್ ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಮೊದಲು 40 ಕೆ.ಜಿ ಚೀಲ ಬದಲಾವಣೆ ಮಾಡುವುದಕ್ಕೆ ಇಪ್ಪತ್ತು ರೂಪಾಯಿ ನೀಡಬೇಕು ಮತ್ತು ಒಂದು ಚೀಲಕ್ಕೆ ಪಟ್ಟಿ ಮಾಡಿಸಿದರೆ ಅವರಿಗೆ ರೂ. 50 ನೀಡಬೇಕು. ಸುಮಾರು ಎರಡರಿಂದ ಮೂರು ದಿವಸ ಅಲ್ಲೇ ಕೂತುಕೊಂಡು ಕಾಲ ಕಳೆಯಬೇಕಾದ ಪರಿಸ್ಥಿತಿ ರೈತರಿಗೆ ಬಂದಿದೆ ಎಂದು ಮಾಜಿ ಶಾಸಕರಾದ ಸಿ.ಎಸ್. ಪುಟ್ಟೇಗೌಡ ವಿಷಾದ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರುಕಟ್ಟೆ ಸ್ಥಳದಲ್ಲಿ ರೈತರಿಗೆ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಶೌಚಾಲಯದ ವ್ಯವಸ್ಥೆ ಇರುವುದಿಲ್ಲ. ನಫೆಡ್ ಬಿಡಬೇಕಾದರೆ ದಲ್ಲಾಳಿಗಳ ಮೂಲಕ ಹೋದರೆ ಒಂದು ಚೀಲಕ್ಕೆ 200 ರೂಪಾಯಿ ನೀಡಿದರೆ ತಕ್ಷಣ ಗೋಡನ್ ಕಳಿಸುತ್ತಾರೆ. ಅಲ್ಲಿ ಯಾವುದೇ ರೀತಿಯ ಕೊಬ್ಬರಿಯನ್ನು ವಿಂಗಡನೆ ಮಾಡುವುದಿಲ್ಲ ಎಂದು ತಿಳಿಸಿದರು.
ಇದೇ ರೀತಿ ನ್ಯಾಯಬೆಲೆ ಅಂಗಡಿಯಿಂದ ರಾಗಿಯನ್ನು ತಂದು ಮತ್ತೆ ಅದೇ ಮಣ್ಣು ಕಲ್ಲು ರಾಗಿಯನ್ನು ಬಿಡುತ್ತಿದ್ದಾರೆ. ಅದೇ ರಾಗಿಯನ್ನು ಮತ್ತೆ ನ್ಯಾಯಬೆಲೆಗಳ ಅಂಗಡಿಗೆ ಕಳಿಸುತ್ತಿದ್ದಾರೆ. ಇದರ ಬಗ್ಗೆ ಜಿಲ್ಲಾಧಿಕಾರಿ ನಪೆಡ್ ಉಗ್ರಾಣಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರೆ ರೈತರಿಗೆ ತುಂಬಾ ಒಳ್ಳೆಯದಾಗುತ್ತದೆ ಎಂದು ತಿಳಿಸಿದರು.
ಪಟ್ಟಣದಲ್ಲಿ ಚುನಾವಣೆಯ ನೀತಿ ಸಮಿತಿ ಜಾರಿಯಲ್ಲಿ ಇದ್ದರೂ ದಿನನಿತ್ಯ ಬರ್ತಡೇ ಪಾರ್ಟಿ ಮಾಡಿಕೊಳ್ಳುವರು ಪಟ್ಟಣದ ಬಡಾವಣೆಗಳಲ್ಲಿ ರಾತ್ರಿ ಹೊತ್ತು ದೊಡ್ಡ ದೊಡ್ಡ ರೀತಿಯ ಪಟಾಕಿಯನ್ನು ಸಿಡಿಸಿ ನೈರ್ಮಲ್ಯವನ್ನು ಹಾಳು ಮಾಡುತ್ತಿದ್ದಾರೆ. ಇದರ ಬಗ್ಗೆ ಹಾಸನದ ಡಿಎಚ್‌ಒ ತಾಲೂಕ ದಂಡಾಧಿಕಾರಿಗಳು ಗಮನಹರಿಸಬೇಕೆಂದು ತಿಳಿಸಿದರು. ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಅಹಿಂಸಾ ಧರ್ಮದ ಬಗ್ಗೆ ಹೆಚ್ಚು ಮಹತ್ವ ನೀಡಿದರು. ಅವರ ಕಾಲದಲ್ಲಿ ಹೇಮಾವತಿ ಹೊಳೆಯಿಂದ ಕುಡಿಯುವ ನೀರು, ರಸ್ತೆ ಮತ್ತು ವಿದ್ಯಾಭ್ಯಾಸಕ್ಕೆ ಹೆಚ್ಚು ಆದ್ಯತೆ ನೀಡಿದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಭಗವಾನ್ ಬಾಹುಬಲಿ ಕರುಣೆ ತೋರಲಿ ಎಂದು ಹೇಳಿದರು.