ಬೇಲೂರು: ವಿಶ್ವವಿಖ್ಯಾತ ಬೇಲೂರು ಶ್ರೀ ಚನ್ನಕೇಶವ ಸ್ವಾಮಿ ರಥೋತ್ಸವ ಸಂದರ್ಭದಲ್ಲಿ ಸಹಸ್ರಾರು ಭಕ್ತರು ಹಾಗೂ ಜಾತ್ರೆ ಅಂಗಡಿಯವರು ಬೇಕಾಬಿಟ್ಟಿ ಕಸವನ್ನು ಎಸೆದಿದ್ದು, ಪುರಸಭೆ ಸಿಬ್ಬಂದಿಗಳು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡು ತ್ಯಾಜ್ಯ ವಸ್ತುಗಳನ್ನು ಸಾಗಿಸುವಲ್ಲಿ ಹೈರಾಣಾಗಿದ್ದಾರೆ.
ಶ್ರೀ ಚನ್ನಕೇಶವ ಸ್ವಾಮಿಯ ರಥೋತ್ಸವದ ಎರಡು ದಿನ ಸಹಸ್ರಾರು ಜನರ ಸಮ್ಮುಖದಲ್ಲಿ ನಡೆಯಿತು. ಬೆಳಿಗ್ಗೆ ತೇರು ಮತ್ತು ಮರುದಿನ ನಾಡ ತೇರಿಗೆ ಜನಸಾಗರವೇ ಹರಿದು ಬಂದಿತ್ತು. ಜಾತ್ರೆಯ ಸಂದರ್ಭದಲ್ಲಿ ಭಕ್ತರಿಗೆ ದಾಸೋಹದ ವ್ಯವಸ್ಥೆ ಹಾಗೂ ಮಜ್ಜಿಗೆ ಪಾನಕ ವಿತರಣೆಗಳನ್ನು ದೇಗುಲ ಸಮಿತಿ ಮತ್ತು ಸಂಘ ಸಂಸ್ಥೆಗಳಿಂದ ಹಮ್ಮಿಕೊಳ್ಳಲಾಗಿತ್ತು. ದೇಗುಲ ರಸ್ತೆಯ ಪ್ರಮುಖ ಮೂಲೆಗಳಲ್ಲಿ ಪ್ರಸಾದ ವಿತರಣೆ ಟ್ಯಾಕ್ಟರ್ ಗಳನ್ನು ನಿಲ್ಲಿಸಲಾಗಿತ್ತು. ಭಕ್ತರು ಪ್ರಸಾದ ತಿಂದ ನಂತರ ತಟ್ಟೆಯನ್ನು ಹಾಕಲು ಅದರ ಪಕ್ಕದಲ್ಲಿ ಪುರಸಭೆಯ ಆಟೋ ಟಿಪ್ಪರ್ ಗಳನ್ನು ನಿಲ್ಲಿಸಲಾಗಿತ್ತು. ಆದರೆ ಕೆಲವು ಭಕ್ತರು ತಟ್ಟೆಗಳನ್ನು ಆಟೋ ಟಿಪ್ಪರ್‌ನಲ್ಲಿ ಹಾಕದೆ ರಸ್ತೆ ಬಳಿ, ಚರಂಡಿ ಬಳಿ ಎಸೆದಿದ್ದರು. ಇನ್ನು ಸಂಘ ಸಂಸ್ಥೆಗಳು ವಿತರಿಸುವ ಮಜ್ಜಿಗೆ ಪ್ಲಾಸ್ಟಿಕ್ ಲೋಟಗಳು ರಸ್ತೆ ಹಾಗೂ ಚರಂಡಿ ಪಾಲಾಗಿತ್ತು. ದೇಗುಲ ರಸ್ತೆಯಲ್ಲಿ ಪ್ಲಾಸ್ಟಿಕ್ ಬಾಟಲ್ ಲೋಟ ಅಡಿಕೆ ತಟ್ಟೆಗಳ ರಾಶಿ ತುಂಬಿತ್ತು.
ಈ ಬಗ್ಗೆ ಆರೋಗ್ಯ ಅಧಿಕಾರಿ ಜ್ಯೋತಿ ಮಾತನಾಡಿ ಕಳೆದ ಎರಡು ದಿನಗಳಿಂದ ಪುರಸಭೆ ಸಿಬ್ಬಂದಿ ಅವಿರತ ಶ್ರಮದಿಂದ ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿದ್ದಾರೆ. 20 ಟ್ಯಾಕ್ಟರ್‌ಗಳಲ್ಲಿ ಕಸ ತುಂಬಿ ಕಳಿಸಿದರೂ ಖಾಲಿಯಾಗುತ್ತಿಲ್ಲ. ಜಾತ್ರೆ ಸಂದರ್ಭದಲ್ಲಿ ತ್ಯಾಜ್ಯವನ್ನು ಎಸೆಯಲು ಆಟೋ ಟಿಪ್ಪರ್‌ಗಳನ್ನು ನಿಲ್ಲಿಸಲಾಗಿತ್ತು. ಆದರೆ ಜನರು ಅವುಗಳನ್ನು ಸಮರ್ಪಕವಾಗಿ ಬಳಸದ ಕಾರಣ ಪುರಸಭೆ ನೌಕರರು ಪರದಾಡುವಂತಾಗಿದೆ. ಜಾತ್ರೆಯಲ್ಲಿ ಅಂಗಡಿ ಹಾಕುವವರು ಕೂಡ ಸ್ವಚ್ಛತೆ ಬಗ್ಗೆ ಗಮನ ಹರಿಸದೆ ಪ್ಯಾಕ್ ಮಾಡಿದ ಕವರ್‌ಗಳನ್ನು ಎಲ್ಲಿಂದರಲ್ಲಿ ಬಿಸಾಕಿದ್ದಾರೆ. ಇಲ್ಲಿ ಮುಗಿದ ನಂತರ ವಿಷ್ಣುಸಮುದ್ರ ಕಲ್ಯಾಣಿಯಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸಬೇಕು. ಅಲ್ಲಿಯು ಕೂಡ ಭಕ್ತರು ಎಸೆದು ಬಿಸಾಕಿರುವ ಬಟ್ಟೆ ಹಾಗೂ ಇನ್ನಿತರ ತ್ಯಾಜ್ಯಗಳನ್ನು ತೆಗೆಯಲು ಹೆಚ್ಚಿನ ಶ್ರಮ ವಹಿಸಬೇಕಾಗಿದೆ. ಸ್ವಚ್ಛತೆಯನ್ನು ಕಾಪಾಡಲು ಸಾರ್ವಜನಿಕರು ನಮಗೆ ಹೆಚ್ಚಿನ ಸಹಕಾರ ನೀಡುವಂತಾಗಬೇಕು ಎಂದರು.