ಅರೇಹಳ್ಳಿ: ಕಳೆದ ಬಾರಿ ಸುರಿದ ಮಳೆಯ ಪರಿಣಾಮ ಮನೆಯ ಹಿಂಭಾಗ ಬಿದ್ದು ಹೋಗಿತ್ತು. ರಿಪೇರಿ ಮಾಡಿಕೊಡುವಂತೆ ಗ್ರಾ.ಪಂ.ಯ ಗಮನಕ್ಕೆ ತಂದರೂ ಪ್ರಯೋಜನವಾಗಲಿಲ್ಲ. ಈ ಬಗ್ಗೆ ಮಹೇಂದ್ರರವರಿಗೆ ವಿಚಾರ ತಿಳಿಸಲಾಗಿ ಎಸ್.ವಿರೂಪಾಕ್ಷರವರು ಯುವಕರ ಸಹಕಾರದಿಂದ ಮನೆಯನ್ನು ರಿಪೇರಿ ಮಾಡಿಕೊಟ್ಟಿದ್ದು, ದೇವರು ಅವರಿಗೆ ಒಳ್ಳೆಯದು ಮಾಡಲಿ ಎಂದು ಕೇಶವನಗರದ ನಿರ್ಗತಿಕ ವೃದ್ಧೆ ಈರಮ್ಮ ಹೇಳಿದರು.
ಬೇಲೂರು ತಾಲೂಕಿನ ಅರೇಹಳ್ಳಿಯ ಕೇಶವನಗರದ ಈರಮ್ಮ(65) ಹಾಗೂ ಇಂದಿರನಗರದ ಭೈರಮ್ಮ(60) ಎಂಬ ಇಬ್ಬರು ವಯೋವೃದ್ಧ ಮಹಿಳೆಯರಿಗೆ ಅಂಬೇಡ್ಕರ್ ನಗರದ ಬೆಂಗಳೂರು ನಿವಾಸಿ, ಯುವ ಉದ್ಯಮಿ ಎಸ್.ವಿರೂಪಾಕ್ಷರವರು ಸ್ವಂತ ಹಣ ವ್ಯಯ ಮಾಡಿ ಎಸ್.ವಿರೂಪಾಕ್ಷ ಅಭಿಮಾನಿ ಬಳಗದ ಸದಸ್ಯರ ಸಹಕಾರದಿಂದ ತಾತ್ಕಾಲಿಕ ಸೂರನ್ನು ಕಲ್ಪಿಸಿ ಹೃದಯ ವೈಶಾಲ್ಯತೆ ಮೆರೆದ ಸಂದರ್ಭವನ್ನು ಉದ್ದೇಶಿಸಿ ಮಾತನಾಡಿದರು.
ಎಸ್.ವಿರೂಪಾಕ್ಷ ಗೆಳೆಯರ ಬಳಗದ ಸದಸ್ಯ ಮಹೇಂದ್ರ ಮಾತನಾಡಿ, ವೃದ್ಧರು ವಾಸವಿದ್ದ ಮನೆಗಳು ಕಳೆದ ಬಾರಿ ಸುರಿದ ಭಾರಿ ಮಳೆಗೆ ಸಿಲುಕಿದ್ದರಿಂದ ವಾಸ ಮಾಡಲು ಅನಾನುಕೂಲವಾಗಿತ್ತು. ನಿರ್ಗತಿಕ ವೃದ್ಧರು ಮನೆಗಳನ್ನು ದುರಸ್ತಿ ಮಾಡಿಕೊಡುವಂತೆ ಗ್ರಾಮ ಪಂಚಾಯಿತಿಯ ಗಮನಕ್ಕೆ ತಂದರೂ ಪ್ರಯೋಜನವಾಗಿರಲಿಲ್ಲ. ಆದ್ದರಿಂದ ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆದಿರುವ ಯುವ ಉದ್ಯಮಿ ಎಸ್.ವಿರೂಪಾಕ್ಷರವರಿಗೆ ಅಭಿಮಾನಿ ಬಳಗದವರು ಮಹಿಳೆಯರ ಸ್ಥಿತಿಗತಿಗಳ ಬಗ್ಗೆ ಗಮನಕ್ಕೆ ತಂದ ಪರಿಣಾಮ ವೈಯಕ್ತಿಕವಾಗಿ ಮುತುವರ್ಜಿ ವಹಿಸಿ ತಾತ್ಕಾಲಿಕ ಸೂರನ್ನು ನಿರ್ಮಿಸಿ ಕೊಟ್ಟಿದ್ದಾರೆ. ಸಾರ್ವಜನಿಕರು ಯುವ ಉದ್ಯಮಿಯ ಹಾಗೂ ಯುವಕರ ಕಾರ್ಯವನ್ನು ಶ್ಲಾಘಿಸಿದ್ದಾರೆ ಎಂದರು. ಕುಮಾರ್, ಶರತ್, ವಿರಾಜು, ಪ್ರದೀಪ್, ಹೂವಮ್ಮ, ಭದ್ರೇಶ್, ಅಭಿ ಮತ್ತಿತರರು ಇದ್ದರು.