ಬೇಲೂರು: ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸಾಮಾಜಿಕ ಕಾರ್ಯಕರ್ತ ನೂರ್ ಅಹಮದ್, ಸವಿತಾ ಸಮಾಜದವರನ್ನು ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ತಾಲೂಕು ಸವಿತಾ ಸಮಾಜದ ಅಧ್ಯಕ್ಷ ಬಿ.ಎಸ್. ಪ್ರಕಾಶ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಎರಡು ದಿನದ ಹಿಂದೆ ಸಾಮಾಜಿಕ ಕಾರ್ಯಕರ್ತ ನೂರು ಅಹ್ಮದ್ ಮೊಬೈಲ್ ಕರೆ ಮಾಡಿ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು ಎಲ್ಲರೂ ಒಂದೆಡೆ ಸೇರಿ ಮತ ಜಾಗೃತಿ ಮೂಡಿಸುವ ಬಗ್ಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ದಯಮಾಡಿ ಬನ್ನಿ ಎಂದು ಹೇಳಿದ್ದರು. ಅದರಂತೆ ಸವಿತಾ ಸಮಾಜದ ಮುಖಂಡರು ನೂರ್ ಅಹಮದ್ ಏರ್ಪಡಿಸಿದ್ದ ಸಭೆಗೆ ಹಾಜರಾಗಿದ್ದೆವು. ಆದರೆ ಸಭೆಯಲ್ಲಿ ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವರ್ಗದ ಬಗ್ಗೆ ವಿಚಾರವನ್ನು ಮಾತನಾಡದೆ ಏಕಾಏಕಿ ಚನ್ನಕೇಶವ ದೇಗುಲ ರಥೋತ್ಸವ ಸಂದರ್ಭದಲ್ಲಿ ಕುರಾನ್ ಪಠಣದ ಬಗ್ಗೆ ಹೇಳಿಕೆ ನೀಡತೊಡಗಿದರು. ಇದರಿಂದ ಅಚ್ಚರಿಗೊಳಗಾದ ನಾವುಗಳು ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ವಾಪಾಸು ಹಿಂತಿರುಗಿದ್ದೆವು ಎಂದರು.
ಗುರುವಾರ ಆಯೋಜಿಸಿದ್ದ ನೂರ್ ಅಹಮದ್ ಸಭೆಗೂ ಸವಿತಾ ಸಮಾಜಕ್ಕೂ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ. ರಾಜಕೀಯ ದುರುದ್ದೇಶದಿಂದ ಸವಿತಾ ಸಮಾಜದವರನ್ನು ಆಹ್ವಾನಿಸಿ ದಿಕ್ಕು ತಪ್ಪಿಸಲು ಪ್ರಯತ್ನಿಸಿರುತ್ತಾರೆ. ರಥೋತ್ಸವ ಸಂದರ್ಭದಲ್ಲಿ ಕುರಾನ್ ಪಠಣ, ಮುಜರಾಯಿ ಹಾಗೂ ಕಾನೂನಿಗೆ ಬಿಟ್ಟ ವಿಚಾರ. ನಾವು 40 ವರ್ಷಗಳಿಂದಲೂ ಚನ್ನಕೇಶವ ಸ್ವಾಮಿಯ ಸೇವೆಯನ್ನು ಮಾಡಿಕೊಂಡು ಆ ಅನ್ನದಿಂದಲೇ ಬದುಕುತ್ತಿದ್ದೇವೆ. ನಮ್ಮ ಸಮಾಜದೊಂದಿಗೆ ಕೋಟೆ ಬಾಯ್ಸ್ ಯುವಕರು ಕೂಡ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸವಿತಾ ಸಮಾಜವು ಯಾವುದೇ ಒಂದು ಕೋಮಿಗೆ ಸೀಮಿತವಾಗಿಲ್ಲ. ಸಮಾಜದ ಎಲ್ಲಾ ಜಾತಿ ಜನಾಂಗ ಧರ್ಮಗಳೊಂದಿಗೂ ನಾವು ಅನ್ಯೊನ್ಯವಾಗಿದ್ದೇವೆ. ಆದರೆ ಸಾಮಾಜಿಕ ಕಾರ್ಯಕರ್ತ ನೂರ್ ಅಹಮದ್ ನಮ್ಮ ಸಮಾಜದವರನ್ನು ದುರುಪಯೋಗಪಡಿಸಿಕೊಳ್ಳಲು ಯತ್ನಿಸಿರುವುದು ಖಂಡನೀಯ. ಯಾವುದೇ ವಿಚಾರವನ್ನು ಸಮಾಜದವರಿಗೆ ಸ್ಪಷ್ಟವಾಗಿ ತಿಳಿಸಿ ಸಭೆಗೆ ಕರೆ ನೀಡಬೇಕು. ಅದು ಬಿಟ್ಟು ರಾಜಕೀಯ ದುರುದ್ದೇಶದಿಂದ ಈ ರೀತಿ ಅಮಾಯಕರನ್ನು ದಿಕ್ಕು ತಪ್ಪಿಸಬಾರದು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಆರ್. ಗೋಪಾಲ, ಗೌರವಾಧ್ಯಕ್ಷ ವೈ. ಟಿ. ಕೃಷ್ಣಮೂರ್ತಿ, ನಗರ ಅಧ್ಯಕ್ಷ ಆನಂದ ಇದ್ದರು.