ಹೊಳೆನರಸೀಪುರ: ಪಟ್ಟಣದಲ್ಲಿ ವಿದ್ಯಾರ್ಥಿ ನಿಲಯ ಕಟ್ಟಡ ನಿರ್ಮಾಣಕ್ಕಾಗಿ ಭೂಮಿ ಪೂಜೆ ಮತ್ತು ನಾನಾ ಉಪವಿಭಾಗೀಯ ಕಚೇರಿಗಳ ಕಟ್ಟಡ ಉದ್ಘಾಟನೆಯನ್ನು ಶಾಸಕ ಎಚ್.ಡಿ.ರೇವಣ್ಣ ನೆರವೇರಿಸಿದರು.
ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪಕ್ಕದಲ್ಲಿ ೫ ಕೋಟಿ ವೆಚ್ಚದಲ್ಲಿ ೫೦೦ ವಿದ್ಯಾರ್ಥಿಗಳ ವಸತಿ ಅನುಕೂಲತೆಗಾಗಿ ಶುಕ್ರವಾರ ಬಿಸಿಎಂ ಮೆಟ್ರಿಕ್ ನಂತರದ ಮಹಿಳಾ ವಿದ್ಯಾರ್ಥಿ ನಿಲಯ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದರು. ಅರಕಲಗೂಡು ರಸ್ತೆಯ PWD ಇಲಾಖೆ ಆವರಣದಲ್ಲಿ ೪ ಕೋಟಿ ರೂ. ವೆಚ್ಚದಲ್ಲಿ ಲೋಕೋಪಯೋಗಿ ವಿಶೇಷ ಉಪ ವಿಭಾಗೀಯ ಕಚೇರಿ ಮತ್ತು ರಾಷ್ಟ್ರೀಯ ಹೆದ್ದಾರಿ ಉಪ ವಿಭಾಗೀಯ ಕಚೇರಿ ಉದ್ಘಾಟಿಸಿದರು.
ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಮಹಿಳಾ ವಿದ್ಯಾರ್ಥಿ ನಿಲಯದ ೨ ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ೫ ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕಾಮಗಾರಿ ಪ್ರಾರಂಭಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತೆರಡು ಅಂತಸ್ತು ನಿರ್ಮಾಣಕ್ಕಾಗಿ ಅನುದಾನ ತರಲಾಗುವುದು. ಇದರಿಂದ ಮುಂದಿನ ಶೈಕ್ಷಣಿಕ ವರ್ಷಕ್ಕೆ ಸುಸಜ್ಜಿತವಾದ ೪ ಅಂತಸ್ತಿನ ಹಾಸ್ಟೆಲ್ ಕಟ್ಟಡ ನಿರ್ಮಾಣ ಮಾಡಿದಂತಾಗುತ್ತದೆ ಎಂದರು.
ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಇಲಾಖೆ ಕಾರ್ಯಪಾಲಕ ಅಭಿಯಂತ ಹೇಮಂತ್, ಬಿಸಿಎಂ ವಿಸ್ತರಣಾಧಿಕಾರಿ ಮಂಜುನಾಥ ಹಾಗೂ ಸಹಾಯಕ ತಾಂತ್ರಿಕ ಅಭಿಯಂತರು ಹಾಜರಿದ್ದರು.