ರಾಮನಾಥಪುರ: ಗ್ರಾಮೀಣ ಪ್ರದೇಶಗಳಿಂದ ಬರುವ ಭಕ್ತರು ಇಲ್ಲಿಯ ಕಾವೇರಿ ನದಿಗೆ ಪೂಜೆಗೆ ತರುವ ತರಕಾರಿಗಳನ್ನು ನದಿಗೆ ಹಾಕಬಾರದು, ಅಲ್ಲದೇ ಪೂಜಾಕೈಕಂರ್ಯ ಅದ ನಂತರ ಸ್ವಚ್ಛ ಮಾಡಿ ಹೋಗುವಂತೆ ಇಲ್ಲಿಗೆ ಬರುವ ಭಕ್ತರುಗಳಿಗೆ ತೀರ್ಥಹಳ್ಳಿ ಭೀಮನಕಟ್ಟೆ ಮಠದ ಶ್ರೀ ರಘುವರೇಂದ್ರ ತೀರ್ಥರು ಕಿವಿಮಾತು ಹೇಳಿದರು.
ರಾಮನಾಥಪುರ ಕಾವೇರಿ ನದಿಯಲ್ಲಿರುವ ಗೋಗರ್ಭ, ಕುಮಾರಧಾರ, ಗಾಯತ್ರಿ ಶಿಲೆ ಮುಂತಾದ ಕಡೆಗಳಲ್ಲಿ ಕೆಲವು ವೇಳೆ ಜಪ ಮಾಡಿ, ಮಾತನಾಡಿದ ಅವರು ಇಂತಹ ಪುಣ್ಯ ಸ್ಥಳದಲ್ಲಿ ಗಲೀಜು ಮಾಡುವುದು ತರವಲ್ಲ ಎಂದರು. ಕಾವೇರಿ ನದಿ ಸ್ವಚ್ಚತಾ ಆಂದೋಲನ ಸಮಿತಿ ವತಿಯಿಂದ 12 ವರ್ಷಗಳಿಂದ ಕಾವೇರಿ ನದಿ ಸಮಿತಿಯ ಅಧ್ಯಕ್ಷ ಎಂ.ಎನ್. ಕುಮಾರಸ್ವಾಮಿ ಹಾಗೂ ತಂಡದವರು ಕಾವೇರಿ ನದಿ ಹರಿಯುವ ಜಲಾನಯನ ಪ್ರದೇಶಗಳಲ್ಲಿ ಸ್ವಚ್ಚತೆ, ಹಾಗೂ ಜನರಿಗೆ ಅರಿವು ಮೂಡಿಸುವ ಕಾರ್ಯ ಮಾಡಿಕೊಂಡು ಬರುತ್ತಿರುವುದಕ್ಕೆ ಕಾವೇರಿ ಜಲಾನಯನ ಪ್ರದೇಶಕ್ಕೆ ಭೇಟಿ ಮಾಡಿ, ಸಮಿತಿಯವರಿಗೆ ಅಭಿನಂದನೆಗಳನ್ನು ತಿಳಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕೊಡಗಿನ ತಲಕಾವೇರಿ ನದಿ, ಜಲಾ ತಲಕಾವೇರಿ, ಭಾಗಮಂಡಲ, ಹಾರಂಗಿ ಜಲಾಶಯ, ಕುಶಾಲನಗರ, ಕಟ್ಟೇಪುರ, ಕೊಣನೂರು, ರಾಮನಾಥಪುರ ನದಿ ಭಾಗದಲ್ಲಿ ಕೆಲವು ಕಡೆ ನದಿ ಮಲೀನವಾಗುತ್ತಿದ್ದು, ಮುಂದಿನ ಪೀಳಿಗೆಗೆ ಬದಲಾವಣೆಗಳನ್ನು ತರಬೇಕಾಗಿದೆ ಎಂದರು. ನದಿ ಪಾತ್ರದ ಸಾರ್ವಜನಿಕರ ಜೊತೆಯಲ್ಲಿ ಸಂವಾದ ನಡೆಸಿದ ಸ್ವಾಮೀಜಿ ಅವರು ಕಾವೇರಿ ನದಿಯಲ್ಲಿ ಮಾಲಿನ್ಯದ ಪ್ರಮಾಣ ಹೆಚ್ಚಾಗುತ್ತಿದ್ದು, ಸಮುದಾಯದ ಎಲ್ಲರೂ ಜೊತೆಗೂಡಿ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ. ಕುಡಿಯುವ ನೀರಿನ ಗುಣಮಟ್ಟವನ್ನು ಮಾಲಿನ್ಯ ನಿಯಂತ್ರಣ ಮಂಡಳಿ ನಿರಂತರವಾಗಿ ಪರಿಕ್ಷಿಸಬೇಕೆಂದು ಹಾಗೂ ನೇರವಾಗಿ ನೀರು ಹರಿಸುವುದಕ್ಕಿಂತ ಸಂಗ್ರಹಿಸುವುದರಿಂದ ಸ್ಥಳೀಯವಾಗಿ ಅಂತರ್ಜಲ ಹೆಚ್ಚುವುದೆಂದು ಸ್ವಾಮೀಜಿ ತಿಳಿಸಿದರು. ದೇವಾಲಯದ ಪಾರು ಪತ್ತೇಗಾರ ರಮೇಶ್ ಭಟ್, ರಾ.ಸು. ನಾಗರಾಜು, ಗುಡಂಣ್ಣ, ಶ್ರೀನಾಥ, ಪ್ರಸನ್ನ, ಮುಂತಾದವರು ಇದ್ದರು.