ಅರಸೀಕೆರೆ: ಇದೇ ಮಾ. ೩೧ರಿಂದ ಏ. ೧೫ರವರೆಗೆ ೬ ದಿನಗಳು ನಡೆಯಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪರೀಕ್ಷೆಯಲ್ಲಿ ತಾಲೂಕಿನ ೧,೮೮೯ ಬಾಲಕರು, ೧೬೯೮ ಬಾಲಕಿಯರು, ಒಟ್ಟು ೩,೫೮೭ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ಕುಮಾರ್ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ತಾಲೂಕಿನಲ್ಲಿ ಒಟ್ಟು ೧೬ ಪರೀಕ್ಷಾ ಕೇಂದ್ರಗಳಿದ್ದು, ಇವುಗಳಲ್ಲಿ ನಾಲ್ಕು ಕೇಂದ್ರಗಳು ನಗರದಲ್ಲಿವೆ. ೧೨ ಕೇಂದ್ರಗಳು ಗ್ರಾಮಾಂತರದಲ್ಲಿವೆ. ಕೋವಿಡ್ ೧೯ರ ವೈರಸ್ ಸೋಂಕಿತ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪರೀಕ್ಷಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಆರೋಗ್ಯದ ಹಿತ ದೃಷ್ಟಿಯಿಂದ ಪರೀಕ್ಷಾ ಕಾರ್ಯ ಯಶಸ್ವಿಗೊಳಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದ ಅವರು ತಾಲೂಕು ಮಟ್ಟದ ಅಧಿಕಾರಿಗಳು ಸಂಚಾರಿ ಜಾಗೃತ ದಳದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ವಿದ್ಯಾರ್ಥಿಗಳು ಆತ್ಮಸ್ಥೈರ್ಯದಿಂದ ಪರೀಕ್ಷೆಯಲ್ಲಿ ಪಾಲ್ಗೊಳ್ಳುವಂತೆ ನಮ್ಮ ಶಿಕ್ಷಕರು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಿದ್ದಾರೆ ಎಂದ ಅವರು ಎಲ್ಲಾ ಕೇಂದ್ರಗಳ ಸಂಪರ್ಕದಲ್ಲಿ ತಾವು ಇರುವುದಾಗಿ ಹೇಳಿದರು.