ಹಾಸನ: ನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ಫಲಾನುಭವಿಗಳ ಸಮಾವೇಶ ಹಾಗೂ ವಿವಿಧ ಇಲಾಖೆಗಳ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಹಾಗೂ ಹಾಸನ ಜಿಲ್ಲೆಗೆ ಸಾಕಷ್ಟು ಕೊಡುಗೆಗೆಗಳನ್ನು ನೀಡಿದ್ದು, ಎಲ್ಲಾ ಇಲಾಖೆಗಳಲ್ಲಿ ಸಾಕಷ್ಟು ಪ್ರಗತಿಯನ್ನು ಕಂಡಿದೆ. ಬಡವರ, ರೈತರ, ಕೂಲಿ ಕಾರ್ಮಿಕರ ಪರ ಬಿಜೆಪಿ ಸರಕಾರದ ಅವಧಿಯಲ್ಲಿ ಹಾಸನ ಜಿಲ್ಲೆಯು ಸಮಗ್ರ ಅಭಿವೃದ್ದಿ ಕಂಡಿದೆ ಎಂದರು.
ಕೋವಿಡ್ ಹಾವಳಿ ಸಂದರ್ಭದಲ್ಲಿಯು ಜನರು ಹಸಿವಿನಿಂದ ಇರಬಾರದು ಎಂಬ ದೃಷ್ಟಿಯಿಂದ ಪಡಿತರ ಮೂಲಕ ನೀಡಲಾಗುವ ಆಹಾರ ಪದಾರ್ಥಗಳನ್ನು ಹೆಚ್ಚಿಸಿ ವಿತರಿಸುವ ಮೂಲಕ ಕೆಲಸವನ್ನು ಸರಕಾರ ಮಾಡಿದೆ. ಹಾಸನ ಜಿಲ್ಲೆಯಲ್ಲಿ ಕೃಷಿ, ತೋಟಗಾರಿಕೆ, ಸಹಕಾರಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳಿಗೆ ಹೆಚ್ಚಿನ ಅನುದಾನ ನೀಡಿ ಪ್ರೋತ್ಸಾಹಿಸಿದೆ ಎಂದರು.
ಕಿಸಾನ್ ಸಮ್ಮಾನ ಯೋಜನೆ ಮೂಲಕ ರೈತರ ಖಾತೆಗೆ ಪ್ರತಿವರ್ಷ ೧೦ ಸಾವಿರ ೫೨ ಲಕ್ಷ ಕುಟುಂಬಕ್ಕೆ ಹಣ ಪಾವತಿಯಾಗುತ್ತಿದೆ. ಇದೇ ರೀತಿ ೫-೬ ಜನಪರ ಯೋಜನೆ ಜಾರಿ ಮಾಡಿದ ಕೀರ್ತಿ ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ ಎಂದರು. ಸಹಕಾರ ಕ್ಷೇತ್ರದಲ್ಲಿ ಅನೇಕ ಸಹಕಾರ ಸಂಸ್ಥೆ ರೈತರಿಗೆ ಅನುಕೂಲವಾಗುವ ಕೆಲಸ ಮಾಡಿದ್ದರೆ. ಬಜೆಟ್‌ನಲ್ಲಿ ಲಕ್ಷಾಂತರ ಮಹಿಳೆಯರಿಗೆ ಅನೇಕ ಸೌಲಭ್ಯ ಒದಗಿಸಿದ ಸರ್ಕಾರ ಉತ್ತಮ ಆಡಳಿತ ನೀಡಿದೆ ಎಂದರು. ಹಾಸನ ಬೇಲೂರು ತಾಲೂಕಿನಲ್ಲಿ ಹೆಚ್ಚು ತರಕಾರಿ ಬೆಳೆಯಲಾಗುತ್ತಿದ್ದು, ರಫ್ತು ಕ್ಷೇತ್ರದಲ್ಲಿ ಮುಂದೆ ಬರಲು ಏರ್ಪೋರ್ಟ್ ನಿರ್ಮಾಣ ಹಂತದಲ್ಲಿ ಇದ್ದು ಹೆಚ್ಚು ಸಹಕಾರಿಯಾಗಲಿದೆ.
ಸಹಕಾರಿ ಸಚಿವ ಎಸ್. ಟಿ ಸೋಮಶೇಖರ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಹಕಾರಿ ಇಲಾಖೆಯ ಮೂಲಕ ಬಡವರ ಅಭಿವೃದ್ಧಿಗೆ ಮುಂದಾಗಿದ್ದು ಸಹಕಾರಿ ಸಂಘಗಳಿಗೆ ನೀಡಲಾಗುತ್ತಿದ್ದ ೩ ಲಕ್ಷ ಬಡ್ಡಿ ರಹಿತ ಸಾಲವನ್ನು ೫ ಲಕ್ಷಕ್ಕೆ ಹೆಚ್ಚಿಸಿದೆ, ಅಲ್ಲದೆ ಇಲಾಖೆಯ ಅಡಿಯಲ್ಲಿ ಇರುವ ಹತ್ತು ಹಲವು ಕಾರ್ಯಕ್ರಮಗಳಲ್ಲಿ ಬಡವರ ಅಭಿವೃದ್ದಿಯನ್ನು ಗುರಿಯಾಗಿಸಿಕೊಂಡು ಕೆಲಸ ಮಾಡುತ್ತಿದೆ ಎಂದರು.
ಉಸ್ತುವಾರಿ ಸಚಿವ ಗೋಪಾಲಯ್ಯ ಆಹಾರ ಖಾತೆ ಸಚಿವರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಇದೀಗ ಅಬಕಾರಿ ಸಚಿವರಾಗಿ ರಾಜ್ಯದಲ್ಲಿ ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಹಾಸನ ಜಿಲ್ಲೆಯ ಮಟ್ಟಿಗೆ ಮೆಚ್ಚುಗೆ ಕಾರ್ಯವಾಗಿದೆ ಎಂದರು. ರಾಜ್ಯದ ೨೨೪ ಕ್ಷೇತ್ರದಲ್ಲಿ ಶಾಸಕರಾದ ಪ್ರೀತಂ ಗೌಡ ಅವರು ಕ್ರಿಯಾಶೀಲ ಕೆಲಸ ಮಾಡಿದ್ದು ೫೦೦೦ ಕೋಟಿ ಅನುಧಾನ ಹಾಸನ ಕ್ಷೇತ್ರದ ಅಭಿವೃದ್ಧಿ ಗೆ ತಂದಿದ್ದಾರೆ ಎಂದರೆ ಅವರ ನ ಸಾಧನೆ ಮೆಚ್ಚಲೆಬೇಕು ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಯಡಿಯೂರಪ್ಪ ಅವರ ಸಹಕಾರದಿಂದ ಹಾಸನಕ್ಕೆ ಕೊಟ್ಟ ಅನುದಾನ ಹೆಚ್ಚು, ವಿಧಾನಸಭೆಯಲ್ಲಿ ಹಾಸನದ ಅಭಿವೃದ್ಧಿ ಕೆಲಸಕ್ಕೆ ಹೆಚ್ಚು ಒತ್ತು ಕೊಟ್ಟವರು ಶಾಸಕ ಪ್ರೀತಂ ಗೌಡ ಅವರು ಎಂದು ನೆನೆಪಿಸಿದರು. ಪ್ರತಿಯೊಂದು ವಿಚಾರದಲ್ಲಿ ರೈತರ ಸ್ತ್ರೀ ಶಕ್ತಿ ಸಂಘಕ್ಕೆ ಬೇಕಾದ ಅನುದಾನ ನೀಡುವಂತೆ ಒತ್ತಾಯಿಸಿ ಕೆಲಸ ಮಾಡಿಸಿರುವ ಪ್ರೀತಂ ಗೌಡ ಅವರ ಕಾರ್ಯಕ್ಕೆ ಉದಾಹರಣೆಯಾಗಿದೆ. ಪ್ರತಿ ರೈತರಿಗೆ ನಿಗದಿತ ಸಾಲ ಒದಗಿಸಲು ಹಾಸನ ಸಹಕಾರ ಬ್ಯಾಂಕ್ ಗೆ ಸೂಚನೆ ನೀಡಲಾಗಿದೆ ಎಂದು ಸೋಮಶೇಖರ ತಿಳಿಸಿದರು.
ಶಾಸಕ ಪ್ರೀತಂ ಗೌಡ ಮಾತನಾಡಿ, ಜಿಲ್ಲೆಯಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ೨೫೦೦ ಕೋಟಿ ವೆಚ್ಚದಲ್ಲಿ ಮನೆಮನೆಗೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಹಾಸನ ಕ್ಷೇತ್ರದಲ್ಲಿ ಹತ್ತಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ರಸ್ತೆ ಸಂಪರ್ಕ, ಒಳಚರಂಡಿ, ಪಾರ್ಕ್ ಅಭಿವೃದ್ಧಿ, ಕೆರೆ ತುಂಬುವ ಕೆಲಸ, ರಿಂಗ್ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಿದ್ದು, ಶೇ ೯೦% ಅಭಿವೃದ್ಧಿ ಕಾಮಗಾರಿ ಮುಗಿದಿದೆ. ರಾಜ್ಯದಲ್ಲಿ ಅತೀ ಹೆಚ್ಚು ಅನುದಾನ ಹಾಸನ ಕ್ಷೇತ್ರಕ್ಕೆ ಬಂದಿದೆ. ಸಾವಿರಾರು ಕೋಟಿ ಅನುದಾನ ತರಲಾಗಿದೆ. ಕೇವಲ ಐದು ವರ್ಷಗಳಲ್ಲಿ ಅಭಿವೃದ್ಧಿಗೆ ವೇಗ ನೀಡಿ ಸಾಧಿಸಿ ತೋರಿಸಲಾಗಿದೆ ಎಂದರು.
ಆಕಸ್ಮಿಕ ಲಾಟರಿ ಟಿಕೆಟ್ ಮೂಲಕ ಆಯ್ಕೆ ಆದ ಶಾಸಕ ಎಂದು ಅಣಕ ಮಾಡಿದರು. ಆದರೆ ಇಂದು ಹಾಸನ ವಿಧಾನಸಭೆ ಕ್ಷೇತ್ರದಲ್ಲಿ ರಿಂಗ್ ರೋಡ್, ಪಾರ್ಕ್ ಅಭಿವೃದ್ಧಿ, ಗ್ರಾಮೀಣ ರಸ್ತೆ, ನಗರದಲ್ಲಿ ಉತ್ತಮ ರಸ್ತೆ, ಯುಜಿಡಿ ಅಭಿವೃದ್ದಿಗೆ ಸಾವಿರಾರು ಕೋಟಿ ಹಣ ಅನುದಾನ ತಂದಿದ್ದೇನೆ. ೨೨೪ ಕ್ಷೇತ್ರದಲ್ಲಿಯೇ ಅತಿಹೆಚ್ಚು ಅನುದಾನ ತಂದ ಕೀರ್ತಿ ಹಾಸನ ಕ್ಷೇತ್ರಕ್ಕೆ ಸಲ್ಲುತ್ತದೆ ಎಂದರು.
ಮುಂದಿನ ದಿನ ಕ್ಷೇತ್ರದಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಗಮನ ಹರಿಸಲಿದ್ದೇನೆ. ಡಬಲ್ ಇಂಜಿನ್ ಸರ್ಕಾರದಿಂದ ಹೇಗೆ ಕೆಲಸ ಆಗಲಿದೆ ಎಂಬುದನ್ನು ಉದಾಹರಣೆಯಾಗಿ ಹಾಸನ ವಿಧಾನಸಭೆ ಕ್ಷೇತ್ರದಲ್ಲಿ ಮಾಡಿ ತೋರಿಸಿದ್ದೇನೆ. ಮುಂದಿನ ದಿನ ಎಲ್ಲಾ ಕ್ಷೇತ್ರದಲ್ಲಿ ಇದೇ ರೀತಿ ಅಭಿವೃದ್ಧಿ ನಡೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ವಿಧಾನ ಪರಿಷತ್ ಸದಸ್ಯ ಮುನಿರಾಜುಗೌಡ, ಜಿಲ್ಲಾಧಿಕಾರಿ ಎಂ.ಎಸ್ ಅರ್ಚನಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್ ಪೂರ್ಣಿಮಾ, ಎಸ್ಪಿ ಹರೀರಾಮ್ ಶಂಕರ್, ಅಪರ ಆನಂದ್, ನಗರ ಸಭೆ ಅಧ್ಯಕ್ಷ ಆರ್. ಮೋಹನ್, ಹಿಮ್ಸ್ ನಿರ್ದೆಶಕ ರವಿಕುಮಾರ್, ಉಪ ವಿಭಾಗಾಧಿಕಾರಿ ಕೃಪಾಲಿನಿ ಸೇರಿದಂತೆ ಇತರರು ಇದ್ದರು.