ಬೇಲೂರು: ತಾಲೂಕಿನಲ್ಲಿ ಒಟ್ಟು 1,97,102 ಮತದಾರರು ಇದ್ದಾರೆ. ಈ ಪೈಕಿ ಪುರುಷರು 99,236, ಮಹಿಳೆಯರು 97,862, ಇತರೆ 04 ಇದ್ದಾರೆ. ಮಹಿಳೆಯರಿಗೆ ಹೋಲಿಕೆ ಮಾಡಿದರೆ ಸಂಖ್ಯೆ 1374 ರಷ್ಟು ಹೆಚ್ಚಿದೆ ಎಂದು ಸಹಾಯಕ ಚುನಾವಣಾಧಿಕಾರಿ ತಹಶೀಲ್ದಾರ್ ಎಂ.ಮಮತಾ ತಿಳಿಸಿದ್ದಾರೆ.
ತಮ್ಮ ಕಚೇರಿಯಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು 2018ರಲ್ಲಿ ವಿಧಾನಸಭಾ ಚುನಾವಣೆ ನಡೆದ ಸಂದರ್ಭದಲ್ಲಿ ತಾಲೂಕಿನಲ್ಲಿ 1,90,465 ಮತ ದಾರರು ಇದ್ದು, ಈಗ 1,97,102ಕ್ಕೆಏರಿಕೆಯಾಗಿದೆ. ಅಂದರೆ 6,637 ರಷ್ಟು ಮತದಾರರು ಹೆಚ್ಚಳವಾಗಿದ್ದಾರೆ.
ತಾಲೂಕಿನಲ್ಲಿ ಒಟ್ಟು 3,461 ವಿಕಲಚೇತರು, 18 ರಿಂದ 19 ವರ್ಷದೊಳಗಿನ 3,388, ಹಾಗೂ 80 ವರ್ಷ ಹಾಗೂ ಮೇಲ್ಪಟ್ಟ ವಯೋಮಾನದ ಮತದಾರರ ಸಂಖ್ಯೆ 4,690 ರಷ್ಟಿದೆ. ಚುನಾವಣಾ ಆಯೋಗವು 40 ವರ್ಷ ಮೀರಿದ ವಯೋಮಾನದ ಹಿರಿಯ ನಾಗರಿಕರಿಗೆ ಮತದಾರರ ಪಟ್ಟಿಯ ದತ್ತಾಂಶದ ಮೂಲದಲ್ಲಿ ಗುರುತು ಮಾಡಲಾದ ವಿಕಲಚೇತನರಿಗೆ ಮತ್ತು ಕೋವಿಡ್-19 ಸೋಂಕಿತ ವ್ಯಕ್ತಿಗಳಿದ್ದರೆ ಅವರುಗಳಿಗೆ ಮನೆಯಿಂದಲೇ ಮತ ಚಲಾಯಿಸುವ ಅವಕಾಶ ಕಲ್ಪಿಸಿದೆ ಎಂದು ಹೇಳಿದರು.
ಮತದಾರರು ನಿರ್ಭೀತಿ, ನಿರಾಂತಕವಾಗಿ ಯಾವುದೇ ಆಸೆ, ಆಮೀಷಗಳಿಗೆ ಒಳಗಾಗದೆ ತಪ್ಪದೆ ಮತದಾನ ಮಾಡುವ ಮೂಲಕ ಚುನಾವಣೆಯನ್ನು ಯಶಸ್ವಿಗೊಳಿಸಬೇಕು. ಮತದಾರರು ಯಾವುದೇ ಅಮೀಷಕ್ಕೆ ಒಳಗಾಗದೆ, ನಿರ್ಭೀತಿಯಿಂದ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವವನ್ನು ಬಲ ಪಡಿಸಬೇಕು. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಪ್ರಪಂಚಕ್ಕೇ ಮಾದರಿಯಾಗಿದೆ. ಚುನಾವಣೆ ಸಂದರ್ಭ ಮಾತ್ರ ಮತದಾರರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಅವಕಾಶವಿರುತ್ತದೆ. ಕಡ್ಡಾಯ ಮತದಾನ ಭಾರತದ ಪ್ರತಿ ಪ್ರಜೆಯ ಹಕ್ಕು. ಆದ್ದರಿಂದ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಮತದಾನ ಮಾಡುವ ಹಕ್ಕಿನ ಅವಕಾಶ ಕಳೆದುಕೊಳ್ಳದೇ ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಮನವಿ ಮಾಡಿ ತಾಲೂಕಿನಲ್ಲಿ ವಿಧಾನಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾಗಿದ್ದು, ಪ್ರತಿಯೊಬ್ಬರೂ ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ತಿಳಿಸಿದ್ದಾರೆ.