ಬೇಲೂರು: ಕಾಡಾನೆ ಹಿಂಡೊಂದು ಗೊನೆಗೆ ಬಂದಿದ್ದ ಬಾಳೆ ಮತ್ತು ಅಡಿಕೆ ತೋಟವನ್ನು ನಾಶ ಮಾಡಿ ಸಾವಿರಾರು ರೂಪಾಯಿ ನಷ್ಟಮಾಡಿರುವ ಘಟನೆ ಸೂರಕೋಡು ಗ್ರಾಮದಲ್ಲಿ ರಾತ್ರಿ ನಡೆದಿದೆ.
ಬೇಲೂರು ತಾಲೂಕು ಅರೇಹಳ್ಳಿ ಹೋಬಳಿ ಸೂರಕೋಡು ಗ್ರಾಮದ ಅಣ್ಣಪ್ಪ ಶೆಟ್ಟಿ ಮತ್ತು ಅರುಣ್ ಅವರ ಬಾಳೆ ತೋಟ ಆನೆ ದಾಳಿಗೆ ತುತ್ತಾಗಿದೆ. ಇವರು ನಾಲ್ಕು ಎಕರೆಯಲ್ಲಿ ಬಾಳೆ ಬೆಳೆದಿದ್ದರು. ಕಾಯಿ ಬಲಿತು ಕಟಾವು ಹಂತ ತಲುಪಿತ್ತು. ಆದರೆ ಕಾಡಾನೆ ಹಿಂಡು ತೋಟವನ್ನು ಬಹುತೇಕ ಹಾಳು ಮಾಡಿವೆ. ಗಿಡವನ್ನು ಬುಡಮೇಲು ಮಾಡಿ ತಿರುಳನ್ನು ತಿಂದುಹಾಕಿವೆ. ಮತ್ತಷ್ಟು ಗಿಡಗಳನ್ನು ತುಳಿದು ಹಾಕಿವೆ. ಅರೇಹಳ್ಳಿ ಭಾಗದಿಂದ ಆನೆ ಬಂದಿವೆ ಎಂದು ಊಹಿಸಲಾಗಿದೆ.
ಈ ಸಂದರ್ಭದಲ್ಲಿ ರೈತ ಅಣ್ಣಪ್ಪ ಶೆಟ್ಟಿ ಮಾತನಾಡಿ, ಈ ಭಾಗದಲ್ಲಿ ಪ್ರತಿವರ್ಷ ಆನೆ ದಾಳಿಗೆ ಲಕ್ಷಾಂತರ ಬೆಲೆಯ ಬೆಳೆಗಳು ಹಾಳಾಗುತ್ತಿವೆ. ಆನೆ ದಾಳಿ ತಪ್ಪಿಸಲು ಶಾಶ್ವತ ಪರಿಹಾರ ಕಂಡುಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ. ಈ ವಿಚಾರವಾಗಿ ಅಧಿಕಾರಿಗಳಿಗೆ ತಿಳಿಸಲು ನೋಡಿದರೆ ಎಲ್ಲಾ ಅಧಿಕಾರಿಗಳು ಚುನಾವಣೆ ಕೆಲಸದಲ್ಲಿದ್ದೇವೆ ಎಂದು ಹೇಳುತ್ತಾರೆ.
ಇನ್ನೂ ಬೇಲೂರು ವಿಧಾನಸಭಾ ಅಭ್ಯರ್ಥಿಗಳು ಚುನಾವಣೆಗೆಗಾಗಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡುತ್ತಿದ್ದಾರೆ. ಆದರೆ ನಮ್ಮಂತ ಬೆಳೆ ನಾಶ ಮಾಡಿಕೊಂಡವರ ಕಷ್ಟ ಆಲಿಸಲು ಯಾರೂ ಮುಂದಾಗುತ್ತಿಲ್ಲ, ಬಿಕ್ಕೋಡು ಅರೇಹಳ್ಳಿ ಭಾಗಗಳಲ್ಲಿ ಆನೆಗಳ ದಾಳಿ ಇಂದು ನೆನ್ನೆಯದಲ್ಲ, ಸುಮಾರು ವರ್ಷಗಳಿಂದ ನಡೆಯುತ್ತಲೇ ಇದೆ. ಅಲ್ಲದೆ ಅನೆಗಳಿಂದ ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. ಆನೆಗಳನ್ನು ಸ್ಥಳಾಂತರ ಮಾಡಲು ಮುಂದಾಗದಿರುವುದು ಇದಕ್ಕೆಲ್ಲ ಕಾರಣವಾಗಿದೆ. ಈ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಆನೆ ದಾಳಿ ತಪ್ಪಿಸಲು ಶಾಶ್ವತ ಕ್ರಮ ಕೈಗೊಳ್ಳಬೇಕು ಎಂದು ಅರೇಹಳ್ಳಿ ಬಿಕ್ಕೋಡು ಭಾಗದ ಗ್ರಾಮಸ್ಥರು ಆಗ್ರಹಿಸಿದ್ದಾರೆ.