ಹಾಸನ: ಮಕ್ಕಳು ಆಟಿಕೆ ವಸ್ತುಗಳು ಸೇರಿದಂತೆ ಇತರೆ ಉಪಯೋಗಿಸಿ ಬೇಡ ಎನಿಸಿದ ವಸ್ತುಗಳನ್ನು ನಮಗೆ ಕೊಡಬಹುದು. ಈ ಮೂಲಕ ಹಾಸನ ನಗರವನ್ನು ಸ್ವಚ್ಛ ನಗರವನ್ನಾಗಿ ರೂಪಿಸಲು ಎಲ್ಲರೂ ಕೈ ಜೋಡಿಸುವಂತೆ ಯೋಜನಾ ನಿರ್ದೇಶಕರಾದ ಬಿ.ಎ ಜಗದೀಶ ಕರೆ ನೀಡಿದರು.
ನಗರದ ರಿಂಗ್ ರಸ್ತೆ, ತನ್ವಿತ್ರಿಶ ಕಲ್ಯಾಣ ಮಂಟಪದ ಹಿಂಭಾಗ ಮೇ 25ರಿಂದ ಜೂನ್ 5ರವರೆಗೂ ಮೇರಿ ಲೈಫ್ಟ್ ಸ್ಟೈಲ್ ಫಾರ್ ಎನವರ್ನಮೆಂಟ್ ಲೈಫ್, ಮೇರ ಸ್ವಚ್ಛ ಶಹರ್ ಯೋಜನೆಯ ನನ್ನ ಜೀವನ, ನನ್ನ ಸ್ವಚ್ಛ ನಗರ ಕಾರ್ಯಕ್ರಮದಡಿ ನಗರಸಭೆಯಿಂದ ಹಮ್ಮಿಕೊಂಡಿದ್ದು, ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗಳಲ್ಲಿ ಆರು ವಿವಿಧ ಬಗೆಯ ತ್ಯಾಜ್ಯವನ್ನು ಗುರುತಿಸಿ ನಿರ್ವಹಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾರ್ವಜನಿಕರು ತಮ್ಮ ಮನೆಯಲ್ಲಿ ಬಳಕೆ ಮಾಡಿ ನಂತರ ಮೂಲೆಯಲ್ಲಿಟ್ಟುರುವ ವಸ್ತುಗಳನ್ನು ನಮಗೆ ತಂದು ಕೊಟ್ಟರೆ ನಾವು ಮರುಬಳಕೆ ಮಾಡಲು ಯೋಗ್ಯವಾಗಿದ್ದರೇ ಅದನ್ನು ಉಪಯೋಗಿಸಲಾಗುವುದು. ಇಲ್ಲವೇ ವಿಲೇವಾರಿ ಮಾಡಲಾಗುವುದು ಎಂದರು.
ನಿಮ್ಮ ಮನೆ ಸುತ್ತಲ ಪರಿಸರ ಮತ್ತು ನಗರವನ್ನು ಈ ಮೂಲಕ ಸ್ವಚ್ಛ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಕ್ಕೆ ಕೈ ಜೋಡಿಸಲು ಮನವಿ ಮಾಡಿದರು. ಮನೆಯಲ್ಲಿ ಮಕ್ಕಳು ಆಟಿಕೆ ವಸ್ತುಗಳ ಬೇಡವಾದಾಗ ಅದನ್ನು ಮೂಲೆಯಲ್ಲಿ ಎಸೆಯುವ ಬದಲು, ನಮಗೆ ನೀಡಿದರೆ ಅದನ್ನು ಬೇರೆಯವರಿಗೆ ತಲುಪಿಸಿ ಅವರಲ್ಲಿ ಸಂತಸ ಹಂಚಬಹುದಾಗಿದೆ. ಆಟಿಕೆ ವಸ್ತುಗಳು, ಹಳೆಯ ದಿನಪತ್ರಿಕೆ, ಪುಸ್ತಕಗಳು, ಬಟ್ಟೆ, ಎಲೆಕ್ಟ್ರಾನಿಕ್ಸ್ ವಸ್ತುಗಳು, ಫ್ಲಾಸ್ಟಿಕ್ ಚೀಲಗಳು ವಿಭಾಗಗಳಾಗಿ ವಿಂಗಡಿಸಲಾಗಿದೆ ಎಂದರು.
ಚಂದ್ರಶೇಖರ್ ಮಾತನಾಡಿ, ಕ್ಲಿಯರಿಂಗ್ ಕಂಪೋಸ್ಟಿಂಗ್ ಘಟಕ ಹೆಸರಿನಲ್ಲಿ ಕಸ ಮುಕ್ತ ಹಾಸನದ ಗುರಿಯೊಂದಿಗೆ ಸ್ವಚ್ಛ ಹಾಸನ ಕನಸಿನೊಂದಿಗೆ ಈ ಕಂಪನಿ ಪ್ರಾರಂಭಿಸಲಾಗಿದ್ದು, ಇದೇ ಜೂನ್ 5ರ ವಿಶ್ವ ಪರಿಸರ ದಿನಾಚರಣೆಯಲ್ಲಿ ಇದಕ್ಕೆ ಅಧಿಕೃತವಾಗಿ ಚಾಲನೆ ಕೊಡಲಾಗುವುದು. ಅದರ ಪೂರ್ವಭಾವಿಯಾಗಿ ಹಾಸನದ ನಗರಸಭೆ ಕಮಿಷನರ್ ಅವರು ನಮ್ಮನ್ನು ಸಂಪರ್ಕಿಸಿ ಮೇರಾ ಸ್ವಚ್ಛ ಶಹರ್ ಯೋಜನೆ ನನ್ನ ಜೀವನ, ನನ್ನ ಸ್ವಚ್ಛ ನಗರ ಕಾರ್ಯಕ್ರಮದಡಿ ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗಳಲ್ಲಿ ಕೇಂದ್ರಗಳ ಆಯ್ಕೆ ಮಾಡಿ 6 ವಿವಿಧ ಬಗೆಯ ತ್ಯಾಜ್ಯಗಳನ್ನು ನಿರ್ವಹಿಸುವ ಬಗ್ಗೆ ತಿಳಿಸಿದ್ದಾರೆ ಎಂದರು. 15 ದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಇದು ವರ್ಷವಿಡಿ ನಡೆಸಿದರೆ ಉತ್ತಮ ಎಂದು ಸಲಹೆ ನೀಡಿದರು.
ನಗರಸಭೆ ಆಯುಕ್ತ ಸತೀಶ್ ಕುಮಾರ್ ಮಾತನಾಡಿ, ಹಸಿರುಭೂಮಿ ಪ್ರತಿಷ್ಠಾನವು ಉತ್ತಮ ಪರಿಸರಕ್ಕಾಗಿ ಕೈ ಜೋಡಿಸಿದ್ದು, ಅದರಂತೆ ಕ್ಲೀನ್ ಸಿಟಿಯಲ್ಲಿ ಹೆಚ್.ಎಸ್ ಚಂದ್ರಶೇಖರ್ ಕೆಲಸ ನಿರ್ವಹಿಸುತ್ತಿದ್ದು, ಹಲವಾರು ಅಂಗ ಸಂಸ್ಥೆಗಳು ಇಂತಹ ಸೇವಾ ಚಟುವಟಿಕೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಹಸಿರುಭೂಮಿ ಪ್ರತಿಷ್ಠಾನದ ಮುಖ್ಯಸ್ಥರಾದ ಆರ್.ಪಿ ವೆಂಕಟೇಶ್ ಮೂರ್ತಿ ಮಾತನಾಡಿ, ತ್ಯಾಜ್ಯ ವಸ್ತುಗಳನ್ನು ನಿರ್ವಹಣೆ ಮಾಡಲು ಮುಂದಾಗಿರುವ ಸಂಸ್ಥೆ ಕಾರ್ಯ ಉತ್ತಮವಾಗಿದೆ. ಮನೆ ಮನೆಗೆ ಹೋಗಿ ತ್ಯಾಜ್ಯ ವಸ್ತುಗಳ ಸಂಗ್ರಹ ಮಾಡಲು ನಗರಸಭೆಯು ವಾಹನ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಹಾಸನ ಸಿಟಿಯನ್ನು ಮೊದಲ ಸ್ಥಾನಕ್ಕೆ ಕೊಂಡೂಯ್ಯಬೇಕು. ಮುಂದಿನ ವರ್ಷದ ವಿಶ್ವ ಪರಿಸರ ದಿನಾಚರಣೆ ಒಳಗೆ ನಮ್ಮ ಹಾಸನ ನಗರವನ್ನು ಅತ್ಯುತ್ತಮವಾದ ಸ್ವಚ್ಛ ನಗರವನ್ನಾಗಿ ತೆಗೆದುಕೊಂಡು ಹೋಗಬೇಕು ಎಂಬುದಾಗಿ ಪ್ರತಿಜ್ಞೆ ಮಾಡೋಣ ಎಂದು ಹೇಳಿದರು.
ಪ್ರಾಯೋಗಿಕವಾಗಿ ಸ್ಥಳದಲ್ಲಿ ಇಡಲಾಗಿದ್ದ ಆರು ಬಗೆಯ ಕಸ ವಿಲೆವಾರಿಯ ಡಬ್ಬಿಯಲ್ಲಿ ಕಸವನ್ನು ಹಾಕುವ ಮೂಲಕ ಚಾಲನೆ ನೀಡಿದರು. ಇದೇ ವೇಳೆ ಕಸದಿಂದ ಮಾಡಲಾದ ಗೊಬ್ಬರವನ್ನು ಎಲ್ಲರಿಗೂ ನೀಡಲಾಯಿತು. ಈ ವೇಳೆ ಸ್ವಚ್ಛ ನಗರಕ್ಕೆ ಸಹಿ ಹಾಕಿ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಯಿತು.
ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವ ಸೆಲ್ಫಿಯು ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ನಗರಸಭೆ ಇಂಜಿನಿಯರ್ ರಂಗಸ್ವಾಮಿ, ಅನಂತ ಪ್ರಭು, ಗೋಪಾಲಕೃಷ್ಣ, ಪ್ರೇಮಕುಮಾರ್, ವೆಂಕಟೇಶ, ಹಿರಿಯ ಕಲಾವಿದ ಬಿ.ಟಿ. ಮಾನವ ಇತರರು ಉಪಸ್ಥಿತರಿದ್ದರು.