ಹಾಸನ: ಕರ್ನಾಟಕ ರಾಜ್ಯ ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಹಾಸನ ಜಿಲ್ಲಾ ಪೊಲೀಸ್ ಘಟಕದ ವ್ಯಾಪ್ತಿಯಲ್ಲಿ ಚುನಾವಣೆಗೆ ಸಂಬಂಧಿಸಿದ ಕರ್ತವ್ಯಗಳನ್ನು ನಿರ್ವಹಿಸಲು ಮೊದಲ ಹಂತದಲ್ಲಿ ಸಿಆರ್‌ಪಿಎಫ್ ಪಡೆ ಆಗಮಿಸಿದ್ದು, ಇಂದು ಹಾಸನದ ಪ್ರಮುಖ ಹಾಗೂ ಸೂಕ್ಷ್ಮ ರಸ್ತೆಗಳಲ್ಲಿ ಪಥ ಸಂಚಲನ ನಡೆಸಿದರು.
ಹಾಸನ ವಿಭಾಗದ ಪೊಲೀಸರ ನೇತೃತ್ವದಲ್ಲಿ 2 ಪಡೆ ಹಾಗೂ ಸ್ಥಳೀಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಸುಮಾರು 500ಕ್ಕೂ ಹೆಚ್ಚು ಸಿಬ್ಬಂದಿಗಳಿಂದ ಪಥ ಸಂಚಲನ ನಡೆಯಿತು.
ನಗರದ ಪೆನ್ಷನ್ ಮೊಹಲ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಮುಖ್ಯ ರಸ್ತೆ, ಸೈಹಾದ್ರಿ ಸರ್ಕಲ್, ಮಹಾವೀರ ವೃತ್ತ, ಸ್ಲೇಟರ್ಸ್ ಹಾಲ್, ಎನ್ ಆರ್ ಸರ್ಕಲ್, ಆರ್ಸಿ ರಸ್ತೆ ಮೂಲಕ ಸಂಚರಿಸಿದ ಪಡೆ ಐಬಿಗೆ ತೆರಳುವ ಮೂಲಕ ಪಥಸಂಚಲನ ಕೊನೆಗೊಳಿಸಿದರು. ಈಗಾಗಲೇ ಪೆನ್ಷನ್ ಮೊಹಲ್ಲ ಲಿಮಿಟ್ಸ್‌ನಲ್ಲಿ ಒಂದು ಬೆಟಾಲಿಯನ್ ನಿಯೋಜನೆ ಮಾಡಲಾಗಿದ್ದು, ಉಳಿದಂತೆ ಮತ್ತೊಂದು ಬೆಟಾಲಿಯನ್ ಜಿಲ್ಲಾ ಕೇಂದ್ರದಲ್ಲಿ ಕಾರ್ಯ ನಿರ್ವಹಿಸಲಿದೆ. ಉಳಿದ ವಿಧಾನಸಭೆ ಕ್ಷೇತ್ರಗಳಿಗೆ ಪ್ರತ್ಯೇಕವಾಗಿ ಒಂದೊಂದು ಬೆಟಾಲಿಯನ್ ನಿಯೋಜನೆ ಮಾಡಲಾಗಿದೆ. ಪ್ರತಿ ಬೆಟಾಲಿಯನ್‌ನಲ್ಲಿ ಸುಮಾರು 110ಕ್ಕೂ ಹೆಚ್ಚು ಕೇಂದ್ರ ಮೀಸಲು ಪಡೆ ಸಿಬ್ಬಂದಿ ಕಾರ್ಯನಿರ್ವಹಣೆ ಮಾಡುತ್ತಾರೆ ಎನ್ನಲಾಗಿದೆ.