ಬೇಲೂರು: ಪಟ್ಟಣದ ಹೃದಯ ಭಾಗದ ಸರ್ಕಾರಿ ಜೂನಿಯರ್ ಕಾಲೇಜು ಅವರಣದಲ್ಲಿ ಪುರಸಭೆ ವತಿಯಿಂದ ರೂ ೩೦ ಲಕ್ಷ ವೆಚ್ಚದಲ್ಲಿ ನಿರ್ಮಿಸಲು ಮುಂದಾಗಿರುವ ತಡೆಗೋಡೆ ಅವೈಜ್ಞಾನಿಕತೆಯಿಂದ ಕೂಡಿದೆ. ತಕ್ಷಣವೇ ಕಾಮಗಾರಿ ಸ್ಥಗಿತಗೊಳಿಸಬೇಕು ಇಲ್ಲವಾದರೆ ನ್ಯಾಯಾಲಯದಿಂದ ತಡೆಯಾಜ್ಷೆ ತರುವ ಬಗ್ಗೆ ಇಲ್ಲಿನ ಕ್ರೀಡಾಭಿಮಾನಿಗಳು ಮತ್ತು ಶಾಲಾ ಆಡಳಿತ ಮಂಡಳಿ ಎಚ್ಚರಿಕೆ ನೀಡಿದ ಘಟನೆ ನಡೆದಿದೆ.
ಈ ಸಂಬಂಧ ಪತ್ರಿಕೆಯೊಂದಿಗೆ ಸರ್ಕಾರಿ ಬಾಲಕ ಮಾಧ್ಯಮಿಕ ಪಾಠ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಪುಟ್ಟಸ್ವಾಮಿ ಮಾತನಾಡಿ, ಬೇಲೂರು ಹೃದಯ ಭಾಗದಲ್ಲಿನ ಜೂನಿಯರ್ ಕಾಲೇಜು ಅವರಣ, ಸರ್ಕಾರಿ ಬಾಲಕರ ಮಾಧ್ಯಮಿಕ ಶಾಲೆಗೆ ಒಳಪಟ್ಟಿದ್ದು, ಇಲ್ಲಿ ದೊಡ್ಡ-ದೊಡ್ಡ ಕಾರ್ಯಕ್ರಮಗಳು ನಡೆಯುತ್ತಿವೆ. ವಿಶೇಷವಾಗಿ ಕ್ರಿಕೆಟ್, ಪುಟ್ಬಾಲ್ ಸೇರಿದಂತೆ ಹತ್ತಾರು ಬಗೆಯ ಕ್ರೀಡೆಗಳು ನಡೆಯುತ್ತಿವೆ. ರಾಜ್ಯಮಟ್ಟದ ಕ್ರೀಡೆಗಳು ಇಲ್ಲಿ ನಡೆದಿರುವುದು ವಿಶೇಷವಾಗಿದೆ. ರಾಷ್ಟ್ರೀಯ ಹಬ್ಬಗಳ ಆಚರಣೆ ಹೀಗೆ ನಾನಾ ಬಗೆಯಲ್ಲಿ ಸಮಾರಂಭವನ್ನು ನಡೆಸಲು ಬೇಲೂರು ಹೃದಯ ಭಾಗದಲ್ಲಿ ಉಳಿದ ಏಕೈಕ್ಯ ಆಟ ಮೈದಾನವಾಗಿದೆ. ಇಂತಹ ಅವರಣ ಯಾವ ಕಾರಣಕ್ಕೂ ಒತ್ತುವರಿಯಾಗಬಾರದು ಎಂಬ ನಿಟ್ಟಿನಲ್ಲಿ ಶಾಸಕರು ಮತ್ತು ಪುರಸಭೆ ರೂ ೩೦ ಲಕ್ಷದಲ್ಲಿ ತಡೆಗೋಡೆ ಕಾಮಗಾರಿ ನಡೆಸುತ್ತಿರುವುದು ಸ್ವಾಗತದ ವಿಷಯವಾಗಿದೆ. ಆದರೆ ತಡೆಗೋಡೆ ನಿರ್ಮಾಣದ ಸಂದರ್ಭದಲ್ಲಿ ಚರಂಡಿಯಿಂದ ೧೫ ಅಡಿ ಜಾಗ ಉಳಿಸಿ ತಡೆಗೋಡೆ ನಿರ್ಮಾಣ ಮಾಡುವ ಅಗತ್ಯದ ಬಗ್ಗೆ ಪುರಸಭೆ ಉತ್ತರಿಸಬೇಕಿದೆ. ಈ ಬಗ್ಗೆ ನಾನು ಸಂಬಂಧ ಪಟ್ಟವರಲ್ಲಿ ಮಾತನಾಡಲಾಗಿದೆ. ರಸ್ತೆ ಅಗಲೀಕರಣದ ನೆಪ ಹೇಳಿಕೊಂಡು ಕಾಮಗಾರಿ ನಡೆಸುವುದು ಬೇಡ. ಮೈದಾನವನ್ನು ಉಳಿಸುವ ನಿಟ್ಟಿನಲ್ಲಿ ತಡೆಗೋಡೆಯಾಗಬೇಕು ಎಂದರು.
ಬೇಲೂರು ಕ್ರಿಕೆಟ್ ಕ್ಲಭ್ ಕಾರ್ಯದರ್ಶಿ ಧರಣೀಶ್(ಪಾಪು) ಮಾತನಾಡಿ, ಬೇಲೂರಿನ ಅಭಿವೃದ್ಧಿಗೆ ನಮ್ಮ ಕಡೆಯಿಂದ ಯಾವುದೇ ಅಡ್ಡಿ ಇಲ್ಲ, ಆದರೆ ಶಾಲಾ ಮೈದಾನವನ್ನು ಉಳಿಸಬೇಕಿದೆ. ಕಾರಣ ಸದ್ಯ ನಡೆಯುತ್ತಿರುವ ತಡೆಗೋಡೆ ಕಾಮಗಾರಿ ಆಟದ ಮೈದಾನ ಕಿರಿದಾಗುವ ಎಲ್ಲಾ ನಿರೀಕ್ಷೆ ಇದೆ. ಈ ಬಗ್ಗೆ ಅಲೋಚಿಸಿ ಕಾಮಗಾರಿ ಮುಂದುವರೆಸಲಿ ಎಂಬುವುದು ನಮ್ಮ ಆಶಯವೆಂದರು. ಒಟ್ಟಾರೆ ಜೂನಿಯರ್ ಕಾಲೇಜು ಮೈದಾನದಲ್ಲಿ ಪುರಸಭೆಯಿಂದ ನಡೆಯುತ್ತಿರುವ ತಡೆಗೋಡೆ ಕಾಮಗಾರಿಯಲ್ಲಿ ರಸ್ತೆ ಭಾಗದಲ್ಲಿ ಜಾಗ ಉಳಿಸುವುದು ಹಿಂದೆ ಫುಡ್‌ಕೋರ್ಟ್ ನಿರ್ಮಾಣಕ್ಕಾಗಿ ಎಂಬುವುದು ಜನತೆಯಲ್ಲಿ ಗುಸುಪಿಸು ಆರಂಭವಾಗಿದೆ. ಫುಡ್‌ಕೋರ್ಟ್ ನಿರ್ಮಿಸಲು ಇಲ್ಲಿ ಯಾವ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಇಲ್ಲಿನ ಫುಟ್ಬಾಲ್ ತಂಡ ಎಚ್ಚರಿಕೆ ನೀಡಿದೆ.
ಬೇಲೂರು ಪುರಸಭೆ ವಿಶೇಷ ಅನುದಾನದ ರೂ. ೩೦ ಲಕ್ಷದಲ್ಲಿ ನಡೆಯುತ್ತಿರುವ ತಡೆಗೋಡೆ ಕಾಮಗಾರಿ ರಸ್ತೆ ಅಗಲೀಕರಣ ದೃಷ್ಟಿಯಿಂದ ಮಾತ್ರ ಜಾಗ ಉಳಿಸಲಾಗಿದೆ. ಹೊರತು ಫುಡ್‌ಕೋರ್ಟ್ ನಿರ್ಮಾಣದ ಉದ್ದೇಶವಿಲ್ಲ, ಸಾರ್ವಜನಿಕರು ಒಂದು ವೇಳೆ ಒಪ್ಪಿಗೆ ನೀಡಿದರೆ ಮಾತ್ರ ಫುಡ್‌ಕೋರ್ಟ್ ನಿರ್ಮಾಣ ಮಾಡುತ್ತೇವೆ.
-ತೀರ್ಥಕುಮಾರಿ. ಅಧ್ಯಕ್ಷೆ ಪುರಸಭೆ ಬೇಲೂರು.