ಹಾಸನ: ನಗರದಲ್ಲಿ ಆಟೋ ಸಂಚಾರ ವ್ಯವಸ್ಥೆ ಸುಧಾರಣೆಗೆ ಹಾಗೂ ಪ್ರಯಾಣ ದರ ಪರಿಷ್ಕರಣೆಗೆ ಅಗತ್ಯ ಕ್ರಮ ವಹಿಸಲಾಗಿದ್ದು ಅದನ್ನು ಪಾಲಿಸುವಂತೆ ಜಿಲ್ಲಾಧಿಕಾರಿ ಅರ್ಚನಾ ಹಾಗೂ ಪೊಲೀಸ್ ವರಿಷ್ಠಧಿಕಾರಿ ಹರಿರಾಂ ಶಂಕರ್ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಆಟೋ ಚಾಲಕರು /ಮಾಲೀಕರ ಮನವಿ ಕುರಿತು ಚರ್ಚೆ ನಡೆಸಿದ ಅವರು ದರ ಪರಿಷ್ಕರಣಾ ನಿರ್ಧಾರ ತಿಳಿಸಿದರು. ಹಾಸನ ನಗರ ವ್ಯಾಪ್ತಿಯ ಆಟೋರಿಕ್ಷಾ ವಾಹನಗಳ ಪ್ರಯಾಣಿಕ ಸಾಗಾಟ ಪ್ರಾರಂಭಿಕ ದರವನ್ನು 1.5 ಕಿ.ಮೀ.ಗೆ 40 ರೂ. ಮತ್ತು ಹೆಚ್ಚುವರಿ ಒಂದು ಕಿ.ಮೀ ಗೆ 20 ರೂ ನಿಗದಿಪಡಿಸುವಂತೆ ಆಟೋ ಚಾಲಕರು ಮತ್ತು ಮಾಲೀಕರ ಸಂಘ ಮನವಿ ಸಲ್ಲಿಸಿತ್ತು.
ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಹರಿರಾಂ ಶಂಕರ ಮಾತನಾಡಿ, ರಾಜ್ಯದಲ್ಲೇ ಬೆಂಗಳೂರಿನಲ್ಲಿ ಹೆಚ್ಚಿನ ದರ ನಿಗದಿಪಡಿಸಿದೆ. ಇದನ್ನೇ ಜಿಲ್ಲೆಗೆ ಅನ್ವಯ ಮಾಡಬಹುದಾಗಿದೆ. ಮೊದಲ 1.5 ಕಿ.ಮೀ. ಗೆ 30 ರೂ. ಹಾಗೂ ನಂತರದ ಪ್ರತಿ ಕಿ.ಮೀ.ಗೆ 15 ರೂ. ನಿಗದಿ ಪಡಿಸಬಹುದಾಗಿದೆ ಎಂದ ಜಿಲ್ಲಾಧಿಕಾರಿಗೆ ಸಮ್ಮತಿ ನೀಡಿದರು.
ಮೀಟರ್ ಕ್ಯಾಲಿಬ್ರೇಷನ್ ಸರಿ ಪಡಿಸಿ ಮೀಟರ್ ಅಳವಡಿಸಿ ಆಟೋ ಓಡಿಸಿ ಎಂದು ಎಸ್.ಪಿ ಸೂಚನೆ ನೀಡಿದರು. ಆಟೋ ಚಾಲಕರು, ಮಾಲಿಕರು ನ್ಯಾಯ ಸಮ್ಮತ ದರ ಪಡೆಯಬೇಕು. ರಾತ್ರಿ ವೇಳೆ ಭಾರೀ ದುಬಾರಿ ಹಣ ಪಡೆಯುತ್ತಿದ್ದು ಅದನ್ನ ಸರಿಪಡಿಸಿಕೊಳ್ಳಿ ಎಂದು ಎಸ್.ಪಿ ಸೂಚಿಸಿದರು. ಹಂತ ಹಂತವಾಗಿ ಎಲ್ಲಾ ಸುಧಾರಣೆ ತರಲಾಗುವುದು. ಈಗಾಗಲೇ ಈ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ ಎಂದು ಹರಿರಾಂ ಶಂಕರ ಹೇಳಿದರು.
ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಆದೇಶದಂತೆ ಕೆ.ಎಸ್.ಆರ್.ಟಿ.ಸಿ ಮತ್ತು ಎಲ್ಲಾ ಖಾಸಗಿ ಪ್ರಯಾಣಿಕ ಸಾರಿಗೆ ವಾಹನಗಳಲ್ಲಿರುವ ನಿರ್ವಾಹಕರು, ಪ್ರಯಾಣಿಕರು ಪ್ರಯಾಣಿಸುವ ಸಮಯದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಗಳನ್ನು ಸಂಗ್ರಹಿಸಿ, ವಿಲೇವಾರಿ ಮಾಡಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲು, ಬಸ್ಸುಗಳಲ್ಲಿ ಚೂಯಿಂಗ್ ಗಮ್ ಹಾಗೂ ತಂಬಾಕು ಉಗುಳುವುದನ್ನು ತಡೆಯುವುದು ಹಾಗೂ ಇತರ ತ್ಯಾಜ್ಯಗಳ ಸಮರ್ಪಕ ನಿರ್ವಹಣೆಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಬಾಗೇಶಪುರ ಮತ್ತು ದುದ್ದ ತಲುಪಲು ರಂಗಾಪುರ ಕಾವಲು ಮಾರ್ಗವಾಗಿ ಹಾಗೂ ಜಾವಗಲ್ ತಲುಪಲು ಬಸ್ ವ್ಯವಸ್ಥೆ ಕಲ್ಪಿಸುವ ಬಗ್ಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿಗಳು ಮಾಹಿತಿ ಕೇಳಿದರು.
ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣ ಅಧಿಕಾರಿ ಅರುಣ್ ಅವರು ಈಗಾಗಲೇ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದರು. ಶಾಲಾ ಕಾಲೇಜು ವಿದ್ಯಾರ್ಥಿಗಳು ಹೆಚ್ಚು ಸಂಚರಿಸುವ ಅವಧಿಯಲ್ಲಿ ಹೆಚ್ಚಿನ ಬಸ್ ಗಳು ಲಭ್ಯವಾಗುವಂತೆ ಹಾಗೂ ಗ್ರಾಮೀಣ ಪ್ರದೇಶಕ್ಕೂ ಬಸ್‌ಗಳ ಸಂಪರ್ಕ ದೊರೆಯುವಂತೆ ಮಾಡುವ ಹಾಗೆ ಜಿಲ್ಲಾಧಿಕಾರಿ ಅರ್ಚನಾ ಅವರು ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸೇರಿ ನಗರದಲ್ಲಿ ಹಲವೆಡೆ ಅನಗತ್ಯವಾಗಿ ಬಸ್ ನಿಲುಗಡೆ ಮಾಡುತ್ತಿದ್ದು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಟಧಿಕಾರಿ ಸೂಚನೆ ನೀಡಿದರು. ಜಿಲ್ಲೆಯ ರಿಕ್ಷಾ ಚಾಲಕರು ಸಹಕಾರ ಮನೋಭಾವ ಹೊಂದಿದ್ದಾರೆ ಮುಂದೆ ತರಲಾಗುವ ಸುಧಾರಣಾ ಕ್ರಮಗಳನ್ನು ಅನುಸರಿಸಬೇಕು ಎಂದು ಹರಿರಾಂ ಶಂಕರ್ ಸೂಚನೆ ನೀಡಿದರು.
1-8-2021ರಿಂದ 28-2-2023ರವರೆಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ನೀಡಿರುವ ರಹದಾರಿ ಪರವಾನಗಿಗಳಿಗೆ ಘಟನೋತ್ತರ ಅನುಮೋದನೆ ನೀಡಲಾಯಿತು. ಬಳಕೆದಾರರ ಸಂಘದ ಅಧ್ಯಕ್ಷರಾದ ರಂಗೇಗೌಡ ಉಪಾಧ್ಯಕ್ಷ ಬೊರೇಗೌಡ ಬಸ್ ನಿಲ್ದಾಣ ಮತ್ತು ರೈಲು ನಿಲ್ದಾಣದಲ್ಲಿ ಪ್ರಿಪೈಯ್ಡ್ ಆಟೋ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದರು.
ಆಟೋ ಚಾಲಕ ಮಾಲೀಕ ಸಂಘದ ಪದಾಧಿಕಾರಿಗಳಾದ ಸಮೀರ್, ಸುದರ್ಶನ ಅಬ್ಬಾಸ್ ಸಭೆಯಲ್ಲಿ ಆಟೋ ಚಾಲಕ ಮಾಲೀಕರ ಸಮಸ್ಯೆಗಳ ಬಗ್ಗೆ ಮಾತನಾಡಿದರು. ಟ್ಯಾಕ್ಸಿ ಸ್ಟಾಂಡ್ ಅಧ್ಯಕ್ಷ ಸುದೀಪ್ ಸಹ ಟಾಕ್ಸಿ ನಿಲುಗಡೆ ಪ್ರದೇಶದಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿ ಹಾಗೂ ಸಿ.ಸಿ.ಟಿ.ವಿ ಅಳವಡಿಕೆಗೆ ಮನವಿ ಮಾಡಿದರು.
ಸಭೆಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಮಲ್ಲೆಶ, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಭಗವಾನ್ ದಾಸ, ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ಅರುಣ, ವಾರ್ತಾ ಇಲಾಖೆ ಅಧಿಕಾರಿಗಳು ಹಾಜರಿದ್ದರು.