ಹಾಸನ: ಪುಣ್ಯಕೋಟಿ ಯೋಜನೆ ಅತ್ಯಂತ ಮಾನವೀಯ ಉದ್ದೇಶದ ಮಹತ್ವಪೂರ್ಣ ಯೋಜನೆಯಾಗಿದ್ದು, ಸರಿಯಾಗಿ ಅನುಷ್ಠಾನ ಮಾಡುವಂತೆ ಜಿಲ್ಲಾಧಿಕಾರಿ ಆನಂದ್ ತಿಳಿಸಿದ್ದಾರೆ. ಇದರ ಯಶಸ್ಸಿಗೆ ಸರ್ಕಾರ, ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರ ಸಹಭಾಗಿತ್ವ ಅತಿ ಅಗತ್ಯ ಎಂದು ಅವರು ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರಾಣಿ ದಯಾ ಸಂಘದ ವಾರ್ಷಿಕ ಮಹಾ ಸಭೆಯಲ್ಲಿ ಮಾತನಾಡಿದ ಅವರು, ಮುಂಬರುವ ಬೇಸಿಗೆಗೆ ತಾತ್ಕಾಲಿಕ ಗೋ ಶಾಲೆಗಳ ಪ್ರಾರಂಭಕ್ಕೆ ಅನುದಾನ ಕಾಯ್ದಿರಿಸಿಕೊಳ್ಳಿ ಎಂದು ಅಪರ ಜಿಲ್ಲಾಧಿಕಾರಿ ಸೂಚಿಸಿದರು.
ಗೋ ಶಾಲೆಗೆ ನಿಗದಿಯಾಗಿರುವ ಅನುದಾನ ಗೋ ಶಾಲೆಗಳಿಗೆ ವರ್ಗಾಯಿಸುವ ಬಗ್ಗೆ, ಗೋಶಾಲೆ ಕಾಮಾಗಾರಿ/ನಿರ್ವಹಣೆ ವೆಚ್ಚ ಅನುಮೋದಿಸುವ ಬಗ್ಗೆ, ಅರಸೀಕೆರೆ ತಾಲ್ಲೂಕಿನ ಬೋರನ ಕೊಪ್ಪಲು ಗ್ರಾಮದ ಪುಣ್ಯಕೋಟಿ ಸರ್ಕಾರಿ ಗೋ ಶಾಲೆ ಮೇವು ಪೂರೈಕೆ ಹಾಗೂ ಚನ್ನಪಟ್ಟಣ ಮತ್ತು ಬೇಲೂರು ಗೋ ಶಾಲೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು.
ಸಭೆಯಲ್ಲಿ ಅಬ್ಬನಘಟ್ಟ ಅಮೃತ ಮಹಲ್ ಕಾವಲ್ ಗೋ ಶಾಲೆಯ ಕಿರು ವಿಡಿಯೋ ಚಿತ್ರ ಪ್ರದರ್ಶಿಸಲಾಯಿತು. ಪಶುಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆ ಉಪ ನಿರ್ದೇಶಕ ಡಾ.ರಮೇಶ ಗೋ ಶಾಲೆ ಅಭಿವೃದ್ಧಿ ಕುರಿತು ವಿವರ ಒದಗಿಸಿದರು.
ಚನ್ನರಾಯಪಟ್ಟಣ ರಾಯಸಮುದ್ರ ಹಾಗೂ ಬೇಲೂರು ತಾಲ್ಲೂಕಿನ ಹಳೇಬೀಡು ಹೋಬಳಿ ಸಿದ್ದಾಪುರ ಗ್ರಾಮದಲ್ಲಿ ಉದ್ದೇಶಿತ ಗೋ ಶಾಲೆ ಪ್ರಾರಂಭಕ್ಕೆ ಕೈಗೊಂಡಿರುವ ಕ್ರಮಗಳು ಕಾಮಗಾರಿ ಪ್ರಗತಿ ವಿವರಿಸಿದರು. ಮುಂಬರುವ ಬೇಸಿಗೆಗೆ ತಾತ್ಕಾಲಿಕ ಗೋ ಶಾಲೆಗಳ ಪ್ರಾರಂಭಕ್ಕೆ ಅನುದಾನ ಕಾಯ್ದಿರಿಸಿಕೊಳ್ಳಿ ಎಂದು ಅಪರ ಜಿಲ್ಲಾಧಿಕಾರಿ ಸೂಚಿಸಿದರು. ಜಿಲ್ಲೆಯಲ್ಲಿ ಗೋ ಶಾಲೆಗಳಿಗೆ ದೇಣಿಗೆ ನೀಡುವವರಿಗೆ ಆದಾಯ ತೆರಿಗೆಯಡಿ 80g ವಿನಾಯಿತಿ ನೀಡಲು ಅಗತ್ಯ ಕ್ರಮ ವಹಿಸಲು ನಿಯಮಾನುಸಾರ ಪ್ರಸ್ತಾವನೆ ಸಲ್ಲಿಸಿ ಎಂದು ಅವರು ಹೇಳಿದರು.
ಗೋವುಗಳ ಮಾರಾಟ ಸಾಗಾಟದ ವೇಳೆ ರೈತರಿಗೆ ತೊಂದರೆ ಮಾಡಬಾರದು ಆದರೆ ಕಳ್ಳತನ ಹಾಗೂ ಅಕ್ರಮ ಗೋ ಸಾಗಾಣಿಕೆಗೆ ಮಾತ್ರ ಕಡಿವಾಣ ಹಾಕಬೇಕು ಎಂದು ಸೂಚನೆ ನೀಡಿದರು. ನಿಯಮಗಳನ್ನು ಮಾಡಿರುವ ನೈಜ ಉದ್ದೇಶ ಅರಿತು ಅದನ್ನು ಮಾನವೀಯ ನೆಲೆಗಟ್ಟಿನಲ್ಲಿ ಪರಿಶೀಲಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಹೇಳಿದರು.
ಯುವ ಸಮುದಾಯ ಪಶು ಸಂಗೋಪನೆಯ ಬಗ್ಗೆ ಒಲವು ಹೊಂದುವಂತೆ ಪ್ರೇರಣೆ ನೀಡಬೇಕು. ಮುದ್ದು ಪ್ರಾಣಿಗಳ ಮಾರಾಟ ಮಳಿಗೆ ಹಾಗೂ ನಾಯಿ ತಳಿ ಸಂವರ್ಧನೆಯಲ್ಲಿ ತೊಡಗಿದವರು ನೊಂದಾಯಿಸಿ ಕೊಳ್ಳಬೇಕಿದ್ದು ಈ ಬಗ್ಗೆ ಪಶುಪಾಲನೆ ಇಲಾಖೆ ಜಾಗೃತಿ ಮೂಡಿಸಿ ನಿಯಮಾನುಸಾರ ಕ್ರಮ ವಹಿಸಬೇಕು ಎಂದರು.
ಸತ್ತ ಪ್ರಾಣಿಗಳ ಮೃತ ದೇಹ, ಪ್ರಾಣಿಗಳ ತ್ಯಾಜ್ಯ ವಿಲೇವಾರಿ ದೊಡ್ಡ ಸಮಸ್ಯೆಯಾಗುತ್ತಿದೆ ದಾರಿ ಬದಿ ಎಸೆಯಲಾಗುತ್ತಿದೆ ಎಂದು ಸಮಿತಿ ಸದಸ್ಯ ಮೋಹನ ಕುಮಾರ್, ಪಾರಸ್ ಜೈನ್ ಸಭೆಯ ಗಮನಕ್ಕೆ ತಂದರು. ನಗರ, ಪಟ್ಟಣ ಪ್ರದೇಶಗಳಲ್ಲಿ ಮೃತ ಪ್ರಾಣಿಗಳನ್ನು ಹೂಳಲು ಅಥವಾ ಸುಡಲು ಜಾಗ ಮೀಸಲಿರಿಸುವ ಅಗತ್ಯವಿದೆ ಎಂದು ಪಶುಪಾಲನಾ ಇಲಾಖೆ ಉಪ ನಿರ್ದೇಶಕರು ತಿಳಿಸಿದರು. ಈ ಬಗ್ಗೆ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಿಗೆ ಪ್ರಸ್ತಾವನೆ ಸಲ್ಲಿಸುವಂತೆ ಅಪರ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಪ್ರಾಣಿಗಳ ಕಳೇಬರಗಳನ್ನು ಪರಿಸರ ಸ್ವೀಕಾರ್ಹ ರೀತಿಯಲ್ಲಿ ವಿಲೇವಾರಿ ಮಾಡಲು ಸ್ಮಶಾನ ಮತ್ತು ದಹನಕಾರಗಳನ್ನು ವ್ಯವಸ್ಥೆ ಮಾಡುವ ಬಗ್ಗೆ ಹಾಗೂ ಬೀದಿ ನಾಯಿಗಳ ಸಂತಾನ ನಿಯಂತ್ರಣ ಕಾರ್ಯಕ್ರಮ ಅನುಷ್ಠಾನ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.
ಸಭೆಯಲ್ಲಿ ಸಮಿತಿ ಸದಸ್ಯರಾದ ಹೆಚ್.ಆರ್ ವೆಂಕಟೇಶ, ಪ್ರೀತಮ್ ವಾಲ್ಟನ್, ರಾಘವೇಂದ್ರ, ಅಪರ ಪೋಲಿಸ್ ವರಿಷ್ಠಾಧಿಕಾರಿ ತಮ್ಮಯ್ಯ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೆಶಕ ಪ್ರಕಾಶ, ಜಿಲ್ಲಾ ವಾರ್ತಾಧಿಕಾರಿ ವಿನೋದ್ ಚಂದ್ರ, ಹಾಸನ ನಗರ ಸಭೆ ಆಯುಕ್ತರ ಪರಮೇಶ್ವರಪ್ಪ ಮತ್ತಿತರರು ಹಾಜರಿದ್ದರು.