ಆಲೂರು: ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ತಾಲೂಕು ಸ್ವೀಪ್ ಸಮಿತಿಯಿಂದ ಪ್ರತಿ ಕಾರ್ಯ ನಿರ್ವಾಹಣಾಧಿಕಾರಿ ನಾರಾಯಣಸ್ವಾಮಿ ನೇತೃತ್ವದಲ್ಲಿ “ಮತದಾನ”ದ ಬಗ್ಗೆ ಮತದಾರರಲ್ಲಿ ಭೌತಿಕ ಅರಿವು ಮೂಡಿಸುವ ಸಂಬಂಧ ವಿಕಲಚೇತನರಿಂದ ತ್ರಿಚಕ್ರ ವಾಹನಗಳಲ್ಲಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ಜಾಗೃತಿ ಜಾಥಾ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಮೇ 10ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರೂ ತಪ್ಪದೇ ಭಾಗವಹಿಸಬೇಕು, ನಿರ್ಭಿತರಾಗಿ ಮತ್ತು ಧರ್ಮ, ಜಾತಿ, ಮತ, ಜನಾಂಗ ಹಾಗೂ ಭಾಷೆ ಸೇರಿದಂತೆ ಯಾವುದೇ ಪ್ರೇರೇಪಣೆಗಳಿಗೆ ಪ್ರಭಾವಿತರಾಗದೆ ಮತ ಚಲಾಯಿಸಬೇಕು ಎಂದ ಅವರು ತಾಲೂಕಿನಲ್ಲಿ 515 ಜನ ಪುರುಷರು ಹಾಗೂ 311 ಜನ ಮಹಿಳೆಯರು ಸೇರಿದಂತೆ ಸುಮಾರು 826 ಜನ ಮತದಾರರಿದ್ದಾರೆ ಎಂದರು.
ಜಾಥಾ ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ನಾರಾಯಣಸ್ವಾಮಿ, ಎಂ ಆರ್ ಡಬ್ಲ್ಯೂ ಜಾಕಿರ್ ಹುಸೇನ್, ವಿ ಆರ್ ಡಬ್ಲ್ಯೂ ಜೀವನ್, ಇಂದಿರಾ, ಪ್ರದೀಪ್ ಸೇರಿದಂತೆ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರು ಹಾಗೂ ತಾಲೂಕು ಪಂಚಾಯಿತಿ ಸಿಬ್ಬಂದಿಗಳು ಇದ್ದರು.