ಹಾಸನ: ವಿಶ್ವ ಕ್ಷಯರೋಗ ದಿನಾಚರಣೆ ಅಂಗವಾಗಿ ನಗರದ ಡಿಸಿ ಕಛೇರಿ ಆವರಣದಲ್ಲಿ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಜಾಗೃತಿ ಮೂಡಿಸುವ ಆಟೋ ಹಾಗೂ ಕಲಾತಂಡದ ಜಾಥಕ್ಕೆ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಕ್ಷಯರೋಗ ಎಂದರೇ ಹಿಂದಿನ ದಿನಗಳಲ್ಲಿ ದೂರ ನಿಂತು ಮಾತನಾಡುವ ಕಾಲವಿತ್ತು. ಇದಕ್ಕೆ ಸರಿಯಾದ ಚಿಕಿತ್ಸೆ ಇರಲಿಲ್ಲ. ಈ ರೋಗ ಇದ್ದವರಿಗೆ ಬದುಕುವುದೇ ಕಷ್ಟಕರ ಎನ್ನುವ ಭಾವನೆ ಇತ್ತು. ಪ್ರಸ್ತುತದಲ್ಲಿ ಯಾರಿಗಾದರೂ ಕ್ಷಯ ರೋಗವಿದ್ದರೆ ನಿಯಮಿತವಾಗಿ ಔಷದೋಪಚಾರವನ್ನು ತೆಗೆದುಕೊಳ್ಳಬಹುದು. ಎರಡು ವಾರಗಳ ಕಾಲ ಇಲ್ಲವೇ ಹೆಚ್ಚಿನ ಅವಧಿಯ ಕೆಮ್ಮು, ರಾತ್ರಿ ವೇಳೆ ಹೆಚ್ಚು ಜ್ವರ ಬರುವುದು, ಕಫದಲ್ಲಿ ರಕ್ತ ಬೀಳುವುದು, ತೂಕ ಕಡಿಮೆ ಆಗುವುದು, ಹಸಿವು ಆಗದೇ ಇರುವುದು ಹಾಗೂ ಕುತ್ತಿಗೆ ಮತ್ತು ಕಂಕುಳಿನ ಭಾಗದಲ್ಲಿ ಗಂಟುಗಳು ಕಾಣಿಸಿಕೊಳ್ಳುವುದು ಏನಾದರೂ ಕಂದು ಬಂದರೆ ಹತ್ತಿರದ ಸರಕಾರಿ ಆಸ್ಪತ್ರೆಗೆ ಹೋಗಿ ಕಫ ಪರೀಕ್ಷೆ ಮಾಡಿಸಿಕೊಳ್ಳುವುದು ಸೂಕ್ತ ಎಂದು ಸಲಹೆ ನೀಡಿದರು.
ಕ್ಷಯರೋಗದ ಬಗ್ಗೆ ಭಯ ಪಡದೆ ಜಾಗೃತಿ ವಹಿಸಿ ಎಂದು ಸಲಹೆ ನೀಡಿದ ಅವರು, ಪ್ರಾರಂಭದಿಂದಲೇ ಇಂತಹ ಖಾಯಿಲೆಗೆ ಸೂಕ್ತ ಚಿಕಿತ್ಸೆ ಪಡೆಯುವುದರ ಮೂಲಕ ಉತ್ತಮ ಬದುಕನ್ನು ಸಾಗಿಸುವಂತೆ ಕರೆ ನೀಡಿದರು.
ಜಾಥಾ ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಬಿ.ಎನ್. ಶಿವಸ್ವಾಮಿ, ಡಾ. ಸಂಧ್ಯಾ , ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯ, ಜಿಲ್ಲಾ ಆರೋಗ್ಯ ಇಲಾಖೆಯ ಡಾ. ಶಿವಶಂಕರ, ಡಾ. ಎಂ.ಹೆಚ್. ಹರೀಶ್, ರವಿಕುಮಾರ, ಆರುಂಧತಿ, ಗೀತಾ, ಹಿರಿಯ ಕಲಾವಿದ ಮತ್ತು ಪ್ರಶಸ್ತಿ ವಿಜೇತ ಬಿ.ಟಿ. ಮಾನವ ಇತರರು ಉಪಸ್ಥಿತರಿದ್ದರು.