ಚನ್ನರಾಯಪಟ್ಟಣ: ತಾಲೂಕಿನ ನಲ್ಲೂರು ಗ್ರಾಮ ಪಂಚಾಯಿತಿಯಲ್ಲಿ ೨೦೨೦ ರಿಂದ ೨೩ರವರೆಗೆ ಉದ್ಯೋಗ ಖಾತ್ರಿ ಆಶ್ರಯ ಮನೆಯಲ್ಲಿ ಕೆಲಸ ಮಾಡದೆ ಸುಮಾರು 20 ಲಕ್ಷ ರೂಪಾಯಿ ಹಣ ಪಾವತಿ ಮಾಡಿಕೊಂಡಿದ್ದಾರೆ ಎಂದು ದೊಡ್ಡಗನ್ನಿ ಗ್ರಾಮದ ಮುಖಂಡ ಮಂಜುನಾಥ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೊಡ್ಡಗನ್ನಿ ಪಾಪಣ್ಣನ ಮನೆ ಹತ್ತಿರದಿಂದ ಚಂದ್ರಣ್ಣನ ಮನೆಯವರೆಗೆ ನೀರಿಗಾವಲಿ ಕೆಲಸ, ಕಾಂಕ್ರೀಟ್ ಚರಂಡಿ ನಿರ್ಮಿಸದೆ ಜೊತೆಗೆ ಕೆಲ ಮನೆಗಳನ್ನು ನಿರ್ಮಾಣ ಮಾಡದೆ ಬಿಲ್ ತೆಗೆದುಕೊಂಡಿದ್ದಾರೆ.
ಪಿಡಿಒ ನಾಗೇಶ್‌ರವರನ್ನು ಅಭಿವೃದ್ಧಿ ಕೆಲಸದ ಮಾಹಿತಿ ಕೇಳಿದರೆ ಅವರು ಉಡಾಫೆಯಿಂದ ಮಾತನಾಡುತ್ತಿದ್ದಾರೆ ಮತ್ತು ನಲ್ಲೂರು ಗ್ರಾಮ ಪಂಚಾಯಿತಿಯಲ್ಲಿ ಜೆಡಿಎಸ್ ಸದಸ್ಯರೂ ಅವರಿಗೆ ಬೇಕಾದವರಿಗೆ ಮಾತ್ರ ಮನೆಯನ್ನು ಕೊಡುತ್ತಿದ್ದಾರೆ. ಮನೆ ನಿರ್ಮಾಣಕ್ಕೆ ಹಣ ಮಂಜೂರು ಮಾಡಿದರೆ ಮನೆಯನ್ನು ನಿರ್ಮಿಸದೆ ಬಿಲ್ ಮಾಡಿಕೊಳ್ಳುವ ಮೂಲಕ ಸರ್ಕಾರದ ಹಣವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ ಎಂದು ದೂರಿದರು.
ತಾಲೂಕು ಪಂಚಾಯಿತಿ ಸಿಇಓ ಹಾಗೂ ಜಿಲ್ಲಾ ಪಂಚಾಯತಿ ಸಿಇಒ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. 15 ದಿನದಲ್ಲಿ ಯಾವುದೇ ಕ್ರಮ ಕೈಗೊಳ್ಳದಿದ್ದರೆ ನಲ್ಲೂರು ಗ್ರಾಮ ಪಂಚಾಯತಿಯ ಮುಂಭಾಗ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಗ್ರಾಮದ ಮುಖಂಡರಾದ ಗಿರೀಶ್, ರಘು, ಅನಂತರಾಜ್, ಎನ್. ನಾಗರಾಜ ಇತರರು ಇದ್ದರು.