ಬೇಲೂರು: ಮದ್ಯವರ್ಜನೆಯಿಂದ ದೂರವಾದಾಗ ಮಾತ್ರ ಸುಂದರ ಬದುಕು ಕಟ್ಟಲು ಸಾಧ್ಯ ಎಂದು ವೃತ್ತ ನಿರೀಕ್ಷಕ ಶ್ರೀಕಾಂತ್ ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹಾಗೂ ಬಿಸಿ ಟ್ರಸ್ಟ್ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಡಾ. ಅಂಬೇಡ್ಕರ್ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ 1,659 ನೇ ಮದ್ಯವರ್ಜನೆ ಶಿಬಿರದ ಉದ್ಘಾಟಿಸಿ ಮಾತನಾಡಿದ ಅವರು ಕುಡಿತದ ದುಷ್ಪರಿಣಾಮದಿಂದ ಬಡ ಕುಟುಂಬಗಳು ಆರ್ಥಿಕ, ಸಾಮಾಜಿಕವಾಗಿ ನಲುಗಿ ಹೋಗುತ್ತಿರುವುದನ್ನು ತಪ್ಪಿಸಿ, ಸಂತೃಪ್ತ ಸಮಾಜ ನಿರ್ಮಾಣಕ್ಕಾಗಿ ಶ್ರೀ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರು, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಗ್ರಾಮೀಣ ಭಾಗದಲ್ಲಿ ಮದ್ಯವರ್ಜನ ಶಿಬಿರಗಳನ್ನು ಆಯೋಜಿಸುತ್ತಿರುವುದು ಸ್ತುತ್ಯಾರ್ಹವಾಗಿದೆ.
ಸಾಮಾಜಿಕ ಪರಿವರ್ತನೆಗಾಗಿ, ಬಡವರ ಅಭಿವೃದ್ದಿಗಾಗಿ ಯಾವುದೇ ಫಲಾಪೇಕ್ಷೆ ಇಲ್ಲದೆ ಡಾ|ವೀರೇಂದ್ರ ಹೆಗಡೆಯವರು ಗ್ರಾಮೀಣ ಪ್ರದೇಶದಲ್ಲಿ ಮದ್ಯವರ್ಜನ ಶಿಬಿರಗಳನ್ನು ಆಯೋಜಿಸಿ ಕುಡಿತಕ್ಕೆ ದಾಸರಾದವರನ್ನು ಈ ಹವ್ಯಾಸದಿಂದ ಮುಕ್ತಗೊಳಿಸಿ ಉತ್ತಮ ಪ್ರಜೆಗಳನ್ನಾಗಿ ಪರಿವರ್ತಿಸುತ್ತಿರುವುದು ಶ್ಲಾಘನೀಯ ಎಂದ ಅವರು ಸರ್ಕಾರದ ಗಮನ ಸೆಳೆಯುವುದು ಸ್ತ್ರೀ ಶಕ್ತಿ ಸ್ವಸಹಾಯ ಸಂಘದ ಕರ್ತವ್ಯ, ಅವರು ಮನಸ್ಸು ಮಾಡಿದರೆ ಸರ್ಕಾರಕ್ಕೆ ಮನವಿ ಮಾಡಿ ಗ್ರಾಮದಲ್ಲಿರುವ ಮದ್ಯದಂಗಡಿಗೆ ಮುಕ್ತಿ ಮಾಡಬಹುದು ಎಂದರು.
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮೋಹನ್ ಕುಮಾರ್ ಮಾತನಾಡಿ ಮದ್ಯವ್ಯಸನಿಗಳು ಸಾಮಾಜಿಕ ಪಿಡುಗಾಗಿ ಪರಿಣಮಿಸಿದೆ. ಇಂದು ಹೆಚ್ಚಾಗಿ ಯುವ ಜನಾಂಗ ಇಂತಹ ದುಶ್ಚಟಗಳಿಗೆ ದಾಸರಾಗುತ್ತಿರುವುದು ದುರದೃಷ್ಟಕರ, ಆದರೆ ಇಲ್ಲಿ ಬಂದಿರುವ ಎಲ್ಲಾ ಶಿಬಿರಾರ್ಥಿಗಳು ಒಂದು ದಿನದ ಮದ್ಯ ಪ್ರಿಯರಾಗದೆ, ನೀವೆಲ್ಲರೂ ಮದ್ಯ ವ್ಯಸನಿಗಳಾಗಿರುವುದಕ್ಕೆ ಇಂತಹ ಶಿಬಿರಗಳು ಕರೆ ತರುವ ಕೆಲಸ ಮಾಡಲಾಗುತ್ತಿದೆ. ಪ್ರತಿಯೊಬ್ಬರೂ ಸಹ ಈ ಶಿಬಿರದ ಉಪಯೋಗ ಪಡೆದು ದೇಶದ ಉತ್ತಮ ಪ್ರಜೆಯಾಗಬೇಕೆಂದು ಶುಭ ಹಾರೈಸಿದರು.
ಚನ್ನಕೇಶವ ಸ್ವಾಮಿ ದೇಗುಲದ ಸಮಿತಿ ಅಧ್ಯಕ್ಷ ಡಾ| ನಾರಾಯಣ್ ಸ್ವಾಮಿ ಮಾತನಾಡಿ ಪ್ರತಿ ಸಾರ್ವಜನಿಕ ಚುನಾವಣೆ ನಡೆದಾಗಲೂ ಶೇ.20 ಮದ್ಯವಸನಿಗಳು ಹೆಚ್ಚಾಗುತ್ತಿದ್ದಾರೆ ಎಂದು ಸಮೀಕ್ಷೆಯೊಂದು ಹೇಳಿದೆ. ಮತ್ತೊಂದು ಕಡೆ ಸರ್ಕಾರ ಮದ್ಯದಂಗಡಿಗಳನ್ನು ತೆರೆದು ಕುಡಿಯಲು ಉತ್ತೇಜಿಸುತ್ತಿದೆ. ಸಮಾಜದಲ್ಲಿ ಕುಡಿತ ಹೆಚ್ಚಾಗಲು, ಜನರು ಹಾಳಾಗಲು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸರ್ಕಾರ ಹಾಗೂ ಜನಪ್ರತಿನಿಧಿಗಳು ಮತ್ತು ರಾಜಕೀಯ ಪಕ್ಷಗಳೇ ಕಾರಣವೆಂದು ಆತಂಕ ವ್ಯಕ್ತಪಡಿಸಿದ ಅವರು ನಗರ ಅಷ್ಟೇ ಅಲ್ಲಾ ಗ್ರಾಮೀಣ ಭಾಗದಲ್ಲಿ ಮದ್ಯದಂಗಡಿ ಪ್ರಾರಂಭವಾಗಿದ್ದು, ಕುಡುಕರಿಲ್ಲದ ಗ್ರಾಮಗಳಿಲ್ಲ ಎಂದಾಗಿದೆ.
ಮದ್ಯ ಹಾಗೂ ಇತರ ವ್ಯಸನಿಗಳಿಗೆ ಮುಕ್ತಿ ಹಾಡಬೇಕೆಂದು ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳು ಜನಜಾಗೃತಿ ವೇದಿಕೆಯನ್ನು ಹುಟ್ಟು ಹಾಕಿದ್ದು, ಈಗಾಗಲೇ 1.50 ಲಕ್ಷಕ್ಕೂ ಹೆಚ್ಚು ಕುಟುಂಬ ರಕ್ಷಣೆ ಮಾಡಿದ್ದಾರೆ ಎಂದರೆ ಅದು ಸಾಮಾನ್ಯ ವಿಷಯವಲ್ಲ ಎಂದರು. ಈ ಸಂದರ್ಭದಲ್ಲಿ ಮದ್ಯವರ್ಜನೆ ಶಿಬಿರದ ಅಧ್ಯಕ್ಷ ದಯಾನಂದ್, ಯೋಜನಾಧಿಕಾರಿ ಚಂದ್ರಶೇಖರ್, ಶ್ರೀಮತಿ ಕಲ್ಪನಾ, ಮೇಲ್ವಿಚಾರಕಿ ಭಾರತಿ, ನವ ಜೀವನ ಸಮಿತಿ ಅಧ್ಯಕ್ಷ ಸೋಮಶೇಖರ್ ಹಾಜರಿದ್ದರು.