ಹಾಸನ: ಆತ ಪ್ರತಿನಿತ್ಯ ಕಾಲೇಜು ಯುವತಿಯೋರ್ವಳನ್ನು ಹಿಂಬಾಲಿಸುತ್ತಿದ್ದ. ಆಕೆ ಕಾಲೇಜಿಗೆ ಹೋಗುವಾಗ, ಕಾಲೇಜಿನಿಂದ ಮನೆಗೆ ತೆರಳುವಾಗ ಆ ಯುವತಿಯ ಹಿಂದೆ ಬಿದ್ದಿದ್ದ. ಕಾಲೇಜು ಮುಗಿಸಿ ತೆರಳುವ ವೇಳೆ ಯುವತಿಯನ್ನು ಚುಡಾಯಿಸಿ ಕೈ ಹಿಡಿದು ಎಳೆದಿದ್ದಾನೆ ಇದರಿಂದ ರೊಚ್ಚಿಗೆದ್ದ ಯುವತಿ ಬೀದಿ ಕಾಮಣ್ಣನಿಗೆ ಅಟ್ಟಾಡಿಸಿ ಚಪ್ಪಲಿಯಿಂದ ಹೊಡೆದಿದ್ದಾಳೆ.
ಅರಸೀಕೆರೆ ಮೂಲದ ಯುವತಿ ಹಾಸನದ ಪದವಿ ಕಾಲೇಜಿಗೆ ಬರುತ್ತಿದ್ದಳು. ಈಕೆಯ ಮೇಲೆ ಆಲೂರು ತಾಲೂಕಿನ, ಕಿರಗಡಲು ಗ್ರಾಮದ ಯಶವಂತ್ ಎಂಬಾತ ಕಣ್ಣು ಹಾಕಿದ್ದ. ಪ್ರತಿನಿತ್ಯ ಆ ಯುವತಿ ಹಿಂದೆ ಬಿದ್ದು ಚುಡಾಯಿಸುತ್ತಿದ್ದ. ಈ ವಿಚಾರವನ್ನು ಯುವತಿ ತನ್ನ ಪೋಷಕರ ಬಳಿಯೂ ಹೇಳಿರಲಿಲ್ಲ. ಎರಡು ಮೂರು ಬಾರಿ ಆ ಯುವಕನಿಗೆ ಎಚ್ಚರಿಕೆಯನ್ನು ಸಹ ನೀಡಿದ್ದಳು. ಆದರೂ ಆತ ತನ್ನ ನಡವಳಿಕೆಯನ್ನು ತಿದ್ದಿಕೊಂಡಿರಲಿಲ್ಲ.
ಯುವತಿ ಕಾಲೇಜು ಮುಗಿಸಿ ತನ್ನ ಗೆಳತಿಯರ ಜೊತೆ ಹೋಗುವಾಗ ಹಾಸನ ನಗರದ ಜಿಲ್ಲಾಸ್ಪತ್ರೆ ಎದುರು ಇರುವ ಬಿಎಸ್‌ಎನ್‌ಎಲ್ ಭವನದ ಬಳಿ ಯುವತಿಯನ್ನು ಚುಡಾಯಿಸಿ ಕೈ ಹಿಡಿದು ಎಳೆದಿದ್ದಾನೆ. ಇದರಿಂದ ರೊಚ್ಚಿಗೆದ್ದ ಯುವತಿ ಪ್ರತಿದಿನ ಹೀಗೆ ಮಾಡ್ತಿಯಾ ಎಂದು ಚಪ್ಪಲಿಯಿಂದ ನಡುರಸ್ತೆಯಲ್ಲಿ ಯುವಕನನ್ನು ಅಟ್ಟಾಡಿಸಿ ಹೊಡೆದಿದ್ದಾಳೆ. ಈ ವಿಚಾರ ತಿಳಿದು ಸ್ಥಳದಲ್ಲಿ ಜಮಾಯಿಸಿ ಸಾರ್ವಜನಿಕರು ಬೀದಿ ಕಾಮಣ್ಣನಿಗೆ ಧರ್ಮದೇಟು ಕೊಟ್ಟು ಪೊಲೀಸರಿಗೊಪ್ಪಿಸಿದ್ದಾರೆ.
ಮಹಿಳಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಯುವಕನನ್ನು ಕರೆದೊಯ್ದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಯುವತಿ ದೂರು ಕೊಡದ ಹಿನ್ನೆಲೆ ಯುವಕನಿಗೆ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ. ಬೀದಿ ಕಾಮಣ್ಣನಿಗೆ ಬುದ್ದಿ ಕಲಿಸಿದ ವಿದ್ಯಾರ್ಥಿನಿ ಧೈರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.