ಸಕಲೇಶಪುರ: ರಾಷ್ಟ್ರೀಯ ಹೆದ್ದಾರಿ ೭೫ರ ಆಲೂರು ಸಮೀಪ ಮಾವನೂರು ಬಳಿ ಕಾರು ಹಾಗೂ ಬೈಕಿನ ನಡುವೆ ಅಪಘಾತ ಸಂಭವಿಸಿ ಯುವಕನೋರ್ವ ಮೃತಪಟ್ಟಿರುವ ಘಟನೆ ಸೋಮವಾರ ಸಂಜೆ ನಡೆದಿದೆ.
ಸಕಲೇಶಪುರ ತಾಲೂಕಿನ ಹೊಸಗೆರೆ ಗ್ರಾಮದ ಜಗದೀಶ ಅವರ ಪುತ್ರ ವಿನೋದ್ ಗೌಡ (೨೨) ಮೃತಪಟ್ಟ ಯುವಕ. ಪದವಿ ಶಿಕ್ಷಣ ಮುಗಿಸಿದ ವಿನೋದ್ ಹಾಸನದ ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ. ಸೋಮವಾರ ಸಂಜೆ ಹಾಸನದಿಂದ ಸ್ವಗ್ರಾಮಕ್ಕೆ ಹಿಂದಿರುಗುವ ವೇಳೆ ಎದುರಿನಿಂದ ಅತಿ ವೇಗ ಹಾಗೂ ಅಜಾಗ್ರತೆಯಿಂದ ಬಂದ ಕಾರು ಬೈಕಿಗೆ ಮುಖಾಮುಖಿ ಡಿಕ್ಕಿ ಹೊಡೆದ ಹಿನ್ನೆಲೆಯಲ್ಲಿ ಯುವಕ ಸ್ಥಳದಲ್ಲಿ ಮೃತಪಟ್ಟಿದ್ದಾನೆ.
ಈ ಸಂಬಂಧ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತಪಟ್ಟ ವಿಷಯ ತಿಳಿದ ಪೋಷಕರು, ಸ್ನೇಹಿತರು ಹಾಗೂ ಬಂಧುಗಳ ಆಕ್ರಂದನ ಮುಗಿಲು ಮುಟ್ಟುವಂತಿತ್ತು.