ಬೇಲೂರು: ಬೇಲೂರು ವಿಧಾನ ಸಭಾ ಸಾರ್ವತ್ರಿಕ ಚುನಾವಣೆ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಿ ಪಾರದರ್ಶಕ, ನಿಷ್ಪಕ್ಷಪಾತವಾಗಿ ನಡೆಯುವಂತೆ ಎಲ್ಲ ಅಧಿಕಾರಿಗಳು ಕ್ರಮ ವಹಿಸಬೇಕೆಂದು ತಹಶೀಲ್ದಾರ ಎಂ.ಮಮತ ತಿಳಿಸಿದರು.
ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ ಪೋಸ್ಟಲ್ ಬ್ಯಾಲೆಟ್ ಮತದಾನ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆ ಕೆಲಸದ ನಿಮಿತ್ತ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಸರ್ಕಾರಿ ನೌಕರರು ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸಲು ತೆರಳಿದ್ದ ಸಂದರ್ಭ ತಮ್ಮ ಮತದಾನದ ಹಕ್ಕನ್ನು ಅಂಚೆ ಮತದಾನ ಮೂಲಕ ಹಕ್ಕನ್ನು ಚಲಾಯಿಸಬಹುದು.
ಚುನಾವಣೆ ಆಯೋಗದ ನಿರ್ದೇಶನದಂತೆ ೮೦ ವರ್ಷ ಮೇಲ್ಪಟ್ಟ ವೃದ್ಧರು ಮತದಾನ ಕೇಂದ್ರಕ್ಕೆ ಬರಲು ಆಗದ ವಿಕಲಾಂಗ ಚೇತನರಿಗೆ ಅಂಚೆ ಮೂಲಕ ಮತದಾನ ಮಾಡುವ ಸೌಲಭ್ಯ ಕಲ್ಪಿಸಿಕೊಡಲಾಗಿದೆ. ಈ ಅವಕಾಶವನ್ನು ಪ್ರತಿಯೊಬ್ಬರು ಸದುಪಯೋಗಪಡಿಸಿಕೊಂಡು ಕಡ್ಡಾಯ ಮತದಾನ ಮಾಡಬೇಕಾಗಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಧಿಕಾರಿಗಳು ಎಲ್ಲರನ್ನು ಸರಿಸಮಾನವಾಗಿ ನೋಡತಕ್ಕದ್ದು. ರಾಜಕೀಯ ಪಕ್ಷಗಳ ನಡತೆ, ಖರ್ಚು ವೆಚ್ಚಗಳ ಬಗ್ಗೆ ಗಮನಹರಿಸಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು ಎಂದರು. ಚುನಾವಣಾ ಆಯೋಗದ ಎಲ್ಲ ವರದಿಗಳನ್ನು ಅಂದಿನ ದಿನವೇ ಕಳುಹಿಸಬೇಕು. ಅಧಿಕಾರಿಗಳ ಜೊತೆಗೆ ನಿರಂತರ ಸಂಪರ್ಕದಲ್ಲಿರಬೇಕೆಂದು ತಿಳಿಸಿದರು.
ಶೀಘ್ರದಲ್ಲೇ ಎಲ್ಲ ಚುನಾವಣಾ ತಂಡಗಳಿಗೆ ತರಬೇತಿ ನೀಡಲಾಗುವುದೆಂದರು. ಪೋಸ್ಟಲ್ ಬ್ಯಾಲೆಟ್ ಬಗ್ಗೆ ಇಲಾಖೆ ಅಧಿಕಾರಿಗಳಿಗೆ ಹೆಚ್ಚಿನ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಎಲ್ಲಾ ಇಲಾಖಾ ಅಧಿಕಾರಿ ಇದ್ದರು.