ಕೊಣನೂರು: ಆತ್ಮ ಯೋಜನೆಯಡಿ ಪೌಷ್ಠಿಕ ಸಾವಯುವ ಕೈತೋಟ ಕುರಿತು ಕ್ಷೇತ್ರ ಪಾಠ ಶಾಲೆಯನ್ನು ದೊಡ್ಡಮಗ್ಗೆ ಹೋಬಳಿಯ ಸಂತೆಮರೂರು ಗ್ರಾಮದ ಯೋಗೇಶ ಎಂಬ ಪ್ರಗತಿಪರ ರೈತರ ತಾಖಿನಲ್ಲಿ ಹಮ್ಮಿಕೊಂಡು ಕ್ಷೇತ್ರೋತ್ಸವ ಕಾರ್ಯಕ್ರಮವನ್ನು ಶುಕ್ರವಾರ ಆಯೋಜಿಸಲಾಗಿತ್ತು.
ಆತ್ಮ ಯೋಜನೆಯ ಉಪ ಯೋಜನಾ ನಿರ್ದೇಶಕಿ ಮಂಜುಳ ಮಾತನಾಡಿ, ಪೌಷ್ಠಿಕ ಕೈತೋಟ ಪ್ರಾಮುಖ್ಯತೆಯ ಕುರಿತು ಅಧೀವೇಶನದಲ್ಲಿ ಹಮ್ಮಿಕೊಂಡ ವಿವಿಧ ತಾಂತ್ರಿಕತೆಗಳ ಕುರಿತು ವಿವರವಾಗಿ ತಿಳಿಸುತ್ತಾ, ಕ್ಷೇತ್ರ ಪಾಠ ಶಾಲೆಯಲ್ಲಿ ಸಾವಯುವ ಪದ್ಧತಿಯಲ್ಲಿ ಮಣ್ಣಿನ ಫಲವತ್ತತೆ ಕಾಪಾಡುವ ಕುರಿತು, ಕೊಟ್ಟಿಗೆ ಗೊಬ್ಬರ ಬಳಕೆ, ಟ್ರೈಕೋಡರ್ಮ ಜೀವಾಣು ಬಳಕೆ, ಜೀವಾಮೃತ ತರಕಾರಿ, ಸುಧಾರಿತ ತಳಿಗಳ ಬಳಕೆ ಇತ್ಯಾದಿ ಸುಧಾರಿತ ಕ್ರಮಗಳನ್ನು ಅಳವಡಿಕೆ ಮಾಡಿ ತರಕಾರಿಗಳನ್ನು ಪ್ರಯೋಗಿಕವಾಗಿ ಬೆಳೆದಿರುವ ಕುರಿತು ನೆರೆದಿದ್ದ ರೈತರಿಗೆ ಮಾಹಿತಿ ನೀಡಿದರು.
ಡಾ. ಶಿವಶಂಕರ್ ಮಾತನಾಡಿ, ನಮ್ಮ ಜೀವನ ಶೈಲಿ, ಆರೋಗ್ಯ, ಸೇವಿಸುತ್ತಿರುವ ಆಹಾರ ಒಂದಕ್ಕೊಂದು ಅವಲಂಭಿತವಾಗಿದ್ದು ಜೀವ ಕಳೆದುಕೊಂಡಿರುವ ಆಹಾರವನ್ನು ಹೊರಗಿನಿಂದ ಕೊಂಡು ತಂದು ಸೇವಿಸಿ ಆರೋಗ್ಯವನ್ನು ಹದಗೆಡಿಸಿ ಜೀವದಲ್ಲಿ ಇರುವ ನೆಮ್ಮದಿಯನ್ನು ಕಳೆದುಕೊಳ್ಳುವ ಬದಲು ಸಮಸ್ಯೆ ಎಷ್ಟು ಗಂಭೀರ ಎಂದು ಸತ್ಯವನ್ನು ಅರಿತು ಸಾವಯುವ ಪದ್ಧತಿಯಲ್ಲಿ ಹಿತ್ತಲ ತೋಟವನ್ನು ಮಾಡಿ ರೋಗಗಳಿಂದ ದೂರವಿರವಬಹುದು ಎಂದರು.
ಸಾಹಾಯಕ ಪ್ರಾದ್ಯಾಪಕಿ ಡಾ. ಭಾರತಿ ಮಾತನಾಡಿ, ಆಹಾರ ಜೌಷಧಿಯಾಗಬೇಕೇ ಹೊರತು ಜೌಷಧಿ ಆಹಾರ ಆಗಬಾರದು. ಆಹಾರವನ್ನು ಸಮ ಪ್ರಮಾಣದಲ್ಲಿ ದಿನನಿತ್ಯ ಸೇವಿಸಬೇಕು. ಹಣ್ಣು ತರಕಾರಿ ಬೆಳೆಕಾಳು ಇತ್ಯಾದಿಗಳನ್ನು ಬಳಸಿದಲ್ಲಿ ಅಪೌಷ್ಠಿಕತೆಯಿಂದ ನರಳುತ್ತಿರುವ ಮಕ್ಕಳಿಗೆ ಪೌಷ್ಠಿಕ ಆಹಾರ ದೊರೆತಂತಾಗುತ್ತದೆ ಎಂದರು.
ತೋಟಗಾರಿಕಾ ಇಲಾಖೆಯ ಹಿರಿಯ ಅಧಿಕಾರಿ ರಾಜೇಶ್ ಮಾತಾನಾಡಿ, ನಾವು ದಿನನಿತ್ಯ ಬಳಸುವ ಎಣ್ಣೆ, ನೀರು, ಉಪ್ಪು, ಸಕ್ಕರೆಯಿಂದ ಹಿಡಿದು ಹೆಚ್ಚಿನ ಆಹಾರ ಪದಾರ್ಥಗಳು ಬಳಸಲು ಯೋಗ್ಯವಲ್ಲದ ಮಟ್ಟಕ್ಕೆ ತಲುಪಿದೆ. ಹಾಗಾಗಿ ನಮ್ಮ ಪೂರ್ವಜನರು ಅಳವಡಿಕೆ ಮಾಡಿಕೊಂಡಿದ್ದನ್ನೇ ನಾವು ಮಾಡಿಕೊಳ್ಳುವ ಅನಿವಾರ್ಯತೆ ಇದೆ ಎಂದು ತಿಳಿಸುತ್ತಾ, ತೋಟಗಾರಿಕೆ ಇಲಾಖೆಯಲ್ಲಿ ಲಭ್ಯವಿರುವ ಯೋಜನೆ ಬಗ್ಗೆ ಮಾಹಿತಿಗಳನ್ನು ತಿಳಿಸಿದರು.
ಡಿಪಿಆರ್ ಚರಣ್ ಪಿಎಂಎಪ್‌ಎಂಇ ಯೋಜನೆ ಬಗ್ಗೆ ಮಾಹಿತಿ ನೀಡಿದರು ಹಾಗೂ ಕೃಷಿ ಅಧಿಕಾರಿ ಅಶ್ವಿನಿ ಇಕೆವೈಸಿ ನೋಂದಣಿ ಕುರಿತು ಮಾಹಿತಿ ನೀಡಿದರು. ಎಟಿಎಂ ಶಾಲಿನಿ ಕಾರ್ಯಕ್ರಮ ಆಯೋಜಿಸಿ ನಿರೂಪಿಸಿದರು. ನೆರೆದಿದ್ದ ಸುಮಾರು 80 ಜನ ರೈತರು ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.