ಬೇಲೂರು: ವಿಶ್ವ ಪ್ರಸಿದ್ದ ಬೇಲೂರು ಪಟ್ಟಣಕ್ಕೆ ನಿತ್ಯ ಸಾವಿರಾರು ಜನರು ದೇಶ-ವಿದೇಶದಿಂದ ಪ್ರವಾಸಿಗರು ಬರುವ ಹಿನ್ನಲೆಯಲ್ಲಿ ಎಲ್ಲೆಂದರಲ್ಲಿ ಬೀದಿ ಬದಿ ಮತ್ತು ತಳ್ಳುಗಾಡಿಗಳ ಮೂಲಕ ವ್ಯಾಪಾರ ನಡೆಸುತ್ತಾ ಪಟ್ಟಣದ ಅಸ್ವಚ್ಛತೆಗೆ ಕಾರಣವಾಗುವ ನಿಟ್ಟಿನಲ್ಲಿ ಪುರಸಭೆಯ ನಿರ್ದೇಶನದ ಮೇರೆಗೆ ಬೀದಿ ಬದಿ ಮತ್ತು ತಳ್ಳುಗಾಡಿಗಳ ವ್ಯಾಪಾರಸ್ಥರು ವ್ಯಾಪಾರ ವಹಿವಾಟು ನಡೆಸಬೇಕು, ಇಲ್ಲವಾದರೆ ಪುರಸಭೆಯಿಂದ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬೇಲೂರು ಮುಖ್ಯಾಧಿಕಾರಿ ಮಂಜುನಾಥ ಎಚ್ಚರಿಕೆ ನೀಡಿದರು.
ಪಟ್ಟಣ ಮುಖ್ಯಾಧಿಕಾರಿ ಕಚೇರಿಯಲ್ಲಿ ನಡೆದ ಬೀದಿ ಬದಿ ಹಾಗೂ ತಳ್ಳುಗಾಡಿ ವ್ಯಾಪಾರಸ್ಥರ ಸಭೆಯಲ್ಲಿ ಮಾತನಾಡಿದ ಅವರು ಈಗಾಗಲೇ ಸಾರ್ವಜನಿಕರಿಂದ ಸಾಕಾಷ್ಟು ದೂರು ಬಂದಿದೆ. ಈ ಬಗ್ಗೆ ಪುರಸಭೆ ಅಧ್ಯಕ್ಷ ನಮಗೆ ಆದೇಶವನ್ನು ನೀಡಿದ ಕಾರಣದಿಂದಲೇ ಇಂದು ಸಭೆಯನ್ನು ನಡೆಸಲಾಗಿದೆ ಎಂದ ಅವರು ಬೇಲೂರು ಪಟ್ಟಣದಲ್ಲಿ ಒಟ್ಟು 317 ಬೀದಿ ಬದಿಯ ವ್ಯಾಪಾರಸ್ಥರು ಇದ್ದಾರೆ ಎಂದು ಗುರುತಿಸಲಾಗಿದೆ. ಆದರೆ 117 ಮಂದಿ ಮಾತ್ರ ಪುರಸಭೆಯಿಂದ ಗುರುತಿನ ಚೀಟಿಯನ್ನು ಪಡೆದು ಸರ್ಕಾರದ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಪಟ್ಟಣದ ಜೂನಿಯರ್ ಕಾಲೇಜು ಅವರಣದಲ್ಲಿ ಬಹುತೇಕ ಬೀದಿ ಬದಿಯ ವ್ಯಾಪಾರಸ್ಥರು ಟಾರ್ಪಾಲ್ ಕಟ್ಟಿಕೊಂಡು ದಿನವಿಡೀ ಪಾನಿಪುರಿ, ತಿಂಡಿಗಳು, ಊಟ ಸೇರಿದಂತೆ ಇನ್ನಿತರ ವ್ಯಾಪಾರ ನಡೆಸುವವರು ಸ್ವಚ್ಛತೆ ಬಗ್ಗೆ ಗಮನ ನೀಡುತ್ತಿಲ್ಲ, ಬೇಕಾಬಿಟ್ಟಿ ಕಸವನ್ನು ಹಾಕುತ್ತಾರೆ. ಅಲ್ಲದೇ ದೇಗುಲ ರಸ್ತೆ, ಹರ್ಡಿಂಕರ್ ವೃತ್ತ, ಕೆಂಪೇಗೌಡ ವೃತ್ತ, ನೆಹರುನಗರ, ಜೆಪಿ ನಗರದಲ್ಲಿ ಕೂಡ ಬೀದಿಬದಿಯ ವ್ಯಾಪಾರಸ್ಥರು ಸ್ವಚ್ಛತೆಗೆ ಗಮನ ನೀಡುತ್ತಿಲ್ಲ, ಪುರಸಭೆಯಿಂದ ನಿಗದಿ ಮಾಡಿದ ಸ್ಥಳದಲ್ಲಿ ವ್ಯಾಪಾರ ನಡೆಸದೆ ತಮಗೆ ಇಷ್ಟ ಬಂದ ಕಡೆಗಳಲ್ಲಿ ವ್ಯಾಪಾರ ನಡೆಸುತ್ತಾ ರಾತ್ರಿ ವೇಳೆಯಲ್ಲಿ ತ್ಯಾಜ್ಯವನ್ನು ಅಲ್ಲಿಯೇ ಉಳಿಸುವುದು ಎಷ್ಟರ ಮಟ್ಟಿಗೆ ಸರಿ? ಇನ್ನು ತರಕಾರಿ ವ್ಯಾಪಾರಕ್ಕೆ ಪಟ್ಟಣದ ಐಡಿಎಸ್‌ಎಂಟಿ ವಾಣಿಜ್ಯ ಮಳಿಗೆಯಲ್ಲಿ ಹೈಟೆಕ್ ತಂತ್ರಜ್ಞಾನದಿಂದ ಕಟ್ಟೆ ನಿರ್ಮಿಸಿದರೂ ಕೂಡ ಇಲ್ಲಿನ ವ್ಯಾಪಾರಿಗಳೇ ಬೀದಿಬದಿಯಲ್ಲಿ ತಳ್ಳುಗಾಡಿಯಲ್ಲಿ ತರಕಾರಿ, ಹಣ್ಣು ಇನ್ನಿತರ ವ್ಯಾಪಾರ ನಡೆಸುತ್ತಾ ಬಡವರು, ನಿರ್ಗತಿಕರು ಮತ್ತು ಅಂಗವಿಕಲರ ಮೇಲೆ ಸವಾರಿ ಮಾಡುವ ಕೆಲಸ ನಡೆಯುತ್ತಿದೆ ಎಂದು ಈಗಾಗಲೇ ಪತ್ರಿಕೆಗಳಲ್ಲಿ ವರದಿ ಪ್ರಕಟವಾದ ನಿಟ್ಟಿನಲ್ಲಿ ಇಂದಿನ ಸಭೆಯಲ್ಲಿ ಮಾಹಿತಿ ತಿಳಿಸಲಾಗಿದೆ ಎಂದರು.
ಪುರಸಭಾ ವ್ಯವಸ್ಥಾಪಕ ಪ್ರಶಾಂತ್ ಮಾತನಾಡಿ, ಪಟ್ಟಣದಲ್ಲಿ ಈಗಾಗಲೇ ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧಿಸಲಾಗಿದೆ. ಅದರೂ ಪಟ್ಟಣದ ಬಹುತೇಕ ಅಂಗಡಿಗಳಲ್ಲಿ ಕಳಪೆ ದರ್ಜೆಯಿಂದ ಕೂಡಿದ ಪ್ಲಾಸ್ಟಿಕ್ ನಿಂದ ವಸ್ತುಗಳನ್ನು ನೀಡುತ್ತಿದ್ದಾರೆ. ವಿಶೇಷವಾಗಿ ಬೀದಿ ಬದಿಯ ಮತ್ತು ತಳ್ಳುಗಾಡಿಗಳಲ್ಲಿ ಹೆಚ್ಚು ಹೆಚ್ಚು ಪ್ಲಾಸ್ಟಿಕ್ ಬಳಕೆ ನಡೆಯುತ್ತಿರುವುದು ಕಂಡು ಬಂದಿದೆ. ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ನಡೆಸುವ ಅಂಗಡಿಗಳನ್ನು ಗುರುತಿಸಿದ್ದು, ಶೀಘ್ರವೇ ದಾಳಿ ನಡೆಸುವ ಬಗ್ಗೆ ತಿಳಿಸಿದರು.
ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷರಾದ ಜ್ಯೋತಿ ಮತ್ತು ಲೋಹಿತ್, ಪುಷ್ಪ ಸೇರಿದಂತೆ ಬೀದಿ ಬದಿಯ ವ್ಯಾಪಾರಸ್ಥರು ಹಾಜರಿದ್ದರು.