ಬೇಲೂರು: ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಾಗಿ ಮತದಾರ ಜಾಗೃತಿ ಅಭಿಯಾನಕ್ಕೆ ಮಾನವ ಸರಪಣಿ ನಿರ್ಮಿಸುವ ಮೂಲಕ ಜಾಗೃತಿ ಮೂಡಿಸಲಾಯಿತು.
ಜಿಲ್ಲಾ ಸ್ವೀಪ್ ಸಮಿತಿ ತಾಲೂಕು ಸ್ವೀಪ್ ಸಮಿತಿ ಕಂದಾಯ ಇಲಾಖೆ, ತಾಲೂಕು ಪಂಚಾಯತಿ ಹಾಗೂ ಪುರಸಭೆ ಹಾಗೂ ಶಿಕ್ಷಣ ಇಲಾಖೆಯ ನೇತೃತ್ವದಲ್ಲಿ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸುವ ಮೂಲಕ ಮತದಾರರ ಜಾಗೃತಿ ಜಾಥಕ್ಕೆ ಚಾಲನೆ ನೀಡಲಾಯಿತು.
ನಂತರ ಮಾತನಾಡಿ ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಸುನಿತಾ ಕಳೆದ ಚುನಾವಣೆಯಲ್ಲಿ ಶೇ. ೬೫% ಕಡಿಮೆ ಮತದಾನವಾಗಿರುವ ಪಂಚಾಯತಿಗಳಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಶೇಕಡಾ ೮೦ರಷ್ಟು ಮತದಾನ ಮಾಡಿಸುವುದು ನಮ್ಮ ತಾಲೂಕಿನ ಸ್ವೀಪ್ ಕಮಿಟಿಯ ಉದ್ದೇಶವಾಗಿದ್ದು, ನಮ್ಮ ವ್ಯಾಪ್ತಿಯ ೧೫ ತಾ.ಪಂ ವ್ಯಾಪ್ತಿಯಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಯುವ ಮತದಾರರು ಹಾಗೂ ಹಿರಿಯ ಮತದಾರರಿಗೆ ಮತದಾನದಿಂದ ಹೊರಗುಳಿಯದಂತೆ ಮನವಿ ಮಾಡಲಾಗುತ್ತಿದೆ. ಈ ಹಿಂದೆ ನಡೆದ ಚುನಾವಣೆಯಲ್ಲಿ ಶೇ. ೬೫ಕ್ಕಿಂತ ಕಡಿಮೆ ಮತದಾನವಾಗಿರುವ ಪಂಚಾಯತಿಗಳನ್ನು ಗುರುತಿಸಲಾಗಿದ್ದು, ಅದರಲ್ಲಿ ಅರೇಹಳ್ಳಿ ಬಂಟೇನಹಳ್ಳಿ ಹಾಗೂ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಒಟ್ಟು ೧೫ ಮತಕೇಂದ್ರದಲ್ಲಿ ಶೇ. ೬೫ಕ್ಕಿಂತ ಮತದಾನ ಕಡಿಮೆ ಆಗಿದೆ. ಅದಕ್ಕಾಗಿ ಅಲ್ಲಿಯೇ ಹೆಚ್ಚು ಗಮನ ಹರಿಸಲಾಗುತ್ತಿದೆ.
ಎಷ್ಟೋ ಮತದಾರರು ಮತದಾನ ಹಕ್ಕನ್ನು ಪಡೆದಿದ್ದರೂ ಮತದಾನದಿಂದ ಹೊರಗುಳಿದಿರುವುದರಿಂದ ಈ ರೀತಿ ಮತದಾನ ಕಡಿಮೆ ಆಗಿದೆ. ಇನ್ನು ಕೆಲವರು ಬೇಕರಿ ಸೇರಿದಂತೆ ಇನ್ನಿತರ ಉದ್ಯಮದಲ್ಲಿ ತೊಡಗಿರುವುದರಿಂದ ಅಂತಹ ಮತದಾರರನ್ನು ಗುರುತು ಮಾಡಲಾಗಿದ್ದು, ಅವರನ್ನು ಕರೆತಂದು ಮತದಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಅವರಿಗೆ ಮನವರಿಕೆ ಮಾಡಲಾಗಿದೆ ಎಂದರು.
ನಂತರ ಕಂದಾಯ ಇಲಾಖೆ ಶಿರಸ್ಥೆದಾರ್ ಮೋಹನ್ ಕುಮಾರ್ ಮಾತನಾಡಿ ಈ ವರ್ಷ ದಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಅನುಕೂಲವಾಗುವ ಉದ್ದೇಶದಿಂದ ೮೦ ವರ್ಷ ಮೇಲ್ಪಟ್ಟವರಿಗೆ ಹಾಗೂ ತೀವ್ರತರವಾದ ಅಂಗವಿಕಲರಿಗೆ ಅಲ್ಲಿಯ ಸ್ಥಳದಲ್ಲೇ ಮತದಾನ ಮಾಡಲು ಅವಕಾಶ ನೀಡಲಾಗಿದೆ. ಸುಮಾರು ೧೨ ಸಾವಿರಕ್ಕೂ ಹೆಚ್ಚು ೮೦ ವರ್ಷದ ಮತದಾರರಿದ್ದು, ಅಂಗವಿಕಲರು ಸುಮಾರು ೩.೫ ಸಾವಿರ ಮತದಾರರು ಇದ್ದು, ಯುವ ಮತದಾರರು ೪,೮೦೦ ಇದ್ದು ಎಲ್ಲರಿಗೂ ಸಹ ಈ ಬಾರಿ ಮುಕ್ತವಾಗಿ ಮತದಾನ ಮಾಡುವ ಅವಕಾಶ ಇದ್ದು ಚುನಾವಣೆ ಇನ್ನು ಏಳು ದಿನ ಇರುವಂತೆ ಮುಂಚಿತವಾಗಿ ಹೊಸದಾಗಿ ಮತದಾರ ಪಟ್ಟಿಯಲ್ಲಿ ಸೇರಿಸಿಕೊಳ್ಳಲು ಯುವ ಮತದಾರರಿಗೆ ಅವಕಾಶ ಕಲ್ಪಿಸಲಾಗಿದೆ ಎಂದರು. ತಾಲೂಕಿನ ವಿವಿಧ ಅಧಿಕಾರಿಗಳು ಹಾಜರಿದ್ದರು.