ಹಾಸನ: ಉಪಕರಣಗಳ ಸಮೇತ ಮಸೀದಿಗೆ ನುಗ್ಗಿದ ಖತರ್ನಾಕ್ ಕಳ್ಳ ಕಚೇರಿಯಲ್ಲಿದ್ದ ಕಂಪ್ಯೂಟರ್, ಕ್ಯಾಮರಾ ಹೊತ್ತೊಯ್ದಿರುವ ಘಟನೆ ನಗರದ ಶರೀಫ್ ಕಾಲೋನಿಯಲ್ಲಿ ನಡೆದಿದೆ.
ತಡರಾತ್ರಿ ಖುಬಾ ಮಸೀದಿಗೆ ಬಂದಿರುವ ಕಳ್ಳ ಕೆಲ ಕಾಲ ಹೊಂಚು ಹಾಕಿದ್ದಾನೆ. ನಂತರ ಗೇಟ್ ಹಾರಿ ಒಳ ಬಂದಿರುವ ಚೋರ ಮಸೀದಿಯ ಮುಖ್ಯದ್ವಾರದ ಬೀಗ ಮುರಿದು ಹುಂಡಿ ಕದಿಯಲು ಯತ್ನಿಸಿದ್ದಾನೆ. ಇದು ಸಾಧ್ಯವಾಗದಿದ್ದಾಗ ಮಸೀದಿಯ ಕಚೇರಿಯ ಬೀಗ ಮುರಿದು ಒಳ ನುಗ್ಗಿದ್ದಾನೆ. ಅಲ್ಲಿದ್ದ ಕಂಪ್ಯೂಟರ್ ಹಾಗೂ ಕೆನಾನ್ ಕ್ಯಾಮರಾವನ್ನು ಕದ್ದೊಯ್ದಿದ್ದಾನೆ.
ಕಳ್ಳತನದ ಇಡೀ ದೃಶ್ಯ ಸಿ.ಸಿ ಟಿವಿಯಲ್ಲಿ ಸೆರೆಯಾಗಿದೆ. ಸುಮಾರು 3 ಲಕ್ಷ ರೂ. ಬೆಲೆಬಾಳುವ ಕಂಪ್ಯೂಟರ್, ಕ್ಯಾಮರಾ ಕಳುವಾಗಿದೆ. ರಾತ್ರಿ ಮಳೆ ಬರುತ್ತಿದ್ದ ಕಾರಣ ಪ್ರಮುಖ ಪತ್ರಿಕೆಯ ಛಾಯಾಗ್ರಾಹಕ ಅತೀಕ್ ಉರ್ ರೆಹಮಾನ್ ತಮ್ಮ ಕ್ಯಾಮರಾವನ್ನು ಮಸೀದಿಯ ಕಚೇರಿಯಲ್ಲಿಟ್ಟು ಮನೆಗೆ ತೆರಳಿದ್ದರು. ಆ ಕ್ಯಾಮರಾದೊಂದಿಗೆ ಕಳ್ಳ ಎಸ್ಕೇಪ್ ಆಗಿದ್ದಾನೆ.
ಕಳೆದ 3 ತಿಂಗಳ ಅವಧಿಯಲ್ಲಿ ಇದೇ ಮಸೀದಿಯಲ್ಲಿ 3 ಬಾರಿ ಕಳ್ಳತನವಾಗಿದೆ. ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾಸನ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.