ಆಲೂರು: ಪಟ್ಟಣದ ಮುಖ್ಯ ರಸ್ತೆಯನ್ನು ಅಂಗಡಿ ಮಳಿಗೆಗಳು ಮತ್ತು ವಾಹನ ನಿಲುಗಡೆ ಮಾಡುವವರು ಅಕ್ರಮಿಸಿಕೊಂಡು ಪುಟ್ ಪಾತ್ ನಲ್ಲಿ ಪಾದಚಾರಿಗಳಿಗೆ ನಡೆದಾಡಲು ಅವಕಾಶವಿಲ್ಲದೆ, ಮುಖ್ಯ ರಸ್ತೆಯಲ್ಲಿಯೇ ನಡೆಕೊಂಡು ಹೋಗುವ ಅಪಾಯಕಾರಿ ಪರಿಸ್ಥಿತಿ ನಿರ್ಮಾಣವಾಗಿದೆ.
ಹೌದು ಪಟ್ಟಣದಲ್ಲಿ ಬೇಕರಿ, ಹೋಟೇಲ್, ದಿನಸಿ ಅಂಗಡಿ, ಬಟ್ಟೆ ಅಂಗಡಿ ಸೇರಿದಂತೆ ಬಹುತೇಕ ಅಂಗಡಿ ಮಳಿಗೆಗಳು ಮತ್ತು ಪುಟ್ಟ ಉದ್ಯೋಗದೊಂದಿಗೆ ಬದುಕು ಕಟ್ಟಿಕೊಳ್ಳುತ್ತಿರುವ ಹೂವು- ಹಣ್ಣಿನ ವ್ಯಾಪಾರ, ಚಹಾದ ಅಂಗಡಿ, ಪಾನಿಪುರಿ, ಗೋಬಿ ಮಂಚೂರಿ, ಮಿರ್ಚಿ ಬಜ್ಜಿ ಸೇರಿದಂತೆ ವಿವಿಧ ರೀತಿಯ ವ್ಯಾಪಾರಸ್ಥರಿಗೆ ಪಾದಚಾರಿ ಮಾರ್ಗವೇ ಇಲ್ಲಿ ಆಸರೆಯಾಗಿದೆ. ಮತ್ತು ಪಾದಚಾರಿ ಮಾರ್ಗಕ್ಕೆ ಹೊಂದಿಕೊಂಡು ಸಾಲು ಸಾಲಾಗಿ ನಿಲ್ಲುವ ಬೈಕ್ ಮತ್ತು ಇತರೆ ವಾಹನಗಳಿಂದಾಗಿ ಅನಿವಾರ್ಯ ಎಂಬಂತೆ ಪಾದಚಾರಿಗಳು ರಸ್ತೆಯಲ್ಲೆ ನಡೆದುಕೊಂಡು ಹೋಗುವ ಅಪಾಯಕಾರಿ ಪರಿಸ್ಥಿತಿ ನಿರ್ಮಾಣವಾಗಿದೆ.
ಆಲೂರು ಪಟ್ಟಣ ಮೊದಲೆ ಹೇಳುವಂತೆ ಚಿಕ್ಕ ತಾಲೂಕು. ಪಟ್ಟಣ ಕೂಡ ವಿಸ್ತಾರವಾಗದೆ ನಿರ್ದಿಷ್ಟ ಪ್ರದೇಶದೊಳಗೆ ವ್ಯಾಪಾರ ವಹಿವಾಟು ನಡೆಯುತ್ತಿದೆ. ಪ್ರತಿನಿತ್ಯ ಕಾಲೇಜು ವಿದ್ಯಾರ್ಥಿಗಳು, ರೈತರು, ಸಾರ್ವಜನಿಕರು ಸೇರಿದಂತೆ ಪಟ್ಟಣಕ್ಕೆ ಸಾವಿರಾರು ಜನರು ಬಂದು ಹೋಗುತ್ತಾರೆ. ಪಟ್ಟಣದಲ್ಲಿ ಮಾರುಕಟ್ಟೆ ಹೊರತುಪಡಿಸಿದರೆ ಬಹುತೇಕ ಯಾವೊಂದು ರಸ್ತೆಯಲ್ಲೂ ಪಾದಚಾರಿ ಮಾರ್ಗಗಳಿಲ್ಲ. ಬಸ್ ನಿಲ್ದಾಣದ ಎದುರು ಇರುವ ಬಹುತೇಕ ಅಂಗಡಿ ಮಳಿಗೆಗಳು ಫುಟ್‌ಪಾತ್ ಇಲ್ಲದೇ ರಸ್ತೆಗಳಲ್ಲಿಯೇ ಹಣ್ಣು, ಹೂವು ಮತ್ತು ಇನ್ನಿತರ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ. ಇದರಿಂದ ಪಾದಚಾರಿಗಳಿಗೆ ಓಡಾಟ ನಡೆಸಲು ಪುಟ್ ಪಾತ್ ರಸ್ತೆ ಇಲ್ಲದಂತಾಗಿದೆ.
ಮತ್ತೊಂದೆಡೆ ಎಲ್ಲೆಂದರಲ್ಲಿ ವಾಹನ ಸವಾರರು ವಾಹನಗಳನ್ನು ನಿಲುಗಡೆ ಮಾಡುತ್ತಿದ್ದಾರೆ. ಪಟ್ಟಣದಲ್ಲಿ ವಾಹನಗಳನ್ನು ಮನ ಬಂದಂತೆ ನಿಲ್ಲಿಸುತ್ತಿರುವುದರಿಂದ ಪ್ರತಿದಿನ ಈ ಮುಖ್ಯರಸ್ತೆಗಳಲ್ಲಿ ಸಂಚರಿಸುವ ಬಸ್‌ಗಳು ಹಾಗೂ ವಾಹನಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಪಟ್ಟಣ ಪಂಚಾಯತಿ ಸಿಬ್ಬಂದಿ ಫುಟ್ ಪಾತ್ ಮತ್ತು ತಳ್ಳುವ ಗಾಡಿಗಳ ಮೇಲೆ ಮಾರಾಟ ಮಾಡುವವರ ವಿರುದ್ಧ ಕ್ರಮ ಜರುಗಿಸಿ ಅವರಿಗೆ ವ್ಯಾಪಾರ ವಹಿವಾಟು ನಡೆಸಲು ಸೂಕ್ತ ವ್ಯವಸ್ಥೆ ಮಾಡಿ ಮತ್ತು ಪಾದಚಾರಿಗಳಿಗೆ ಸುಲಭ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಬೇಕಿದೆ. ಮತ್ತು ಪೋಲಿಸ್ ಇಲಾಖೆಯು ಸಹ ವಾಹನ ನಿಲುಗಡೆ ಮಾಡಲು ಸೂಕ್ತ ಜಾಗದ ವ್ಯವಸ್ಥೆ ಮಾಡಿ ನಿಲುಗಡೆ ಫಲಕಗಳನ್ನು ಅಳವಡಿಸಬೇಕಿದೆ.
ಮುಖ್ಯ ರಸ್ತೆಯ ಎರಡು ಬದಿಯಲ್ಲಿ ವ್ಯಾಪಾರಸ್ಥರು ತಮ್ಮ ಅಂಗಡಿ ಮಳಿಗೆಯಿಂದ ಮುಂದೆ ಬಂದು ವ್ಯಾಪಾರ ಮಾಡುತ್ತಿರುವುದು ಸಾರ್ವಜನಿಕರಿಗೆ ಓಡಾಡಲು ಕಾಲುದಾರಿ ಸಮಸ್ಯೆ ಹಾಗೂ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿರುವ ಬಗ್ಗೆ ದೂರು ಬಂದಿದ್ದು ಇದರ ಬಗ್ಗೆ ಈ ಹಿಂದೆ ನಡೆದ ಕೌನ್ಸಿಲ್ ಸಭೆಯಲ್ಲಿ ಚರ್ಚೆ ನಡೆಸಿ ತೆರವುಗೊಳಿಸಲು ಕ್ರಮ ಕೈಗೊಂಡಿದ್ದೇವೆ. ಜೊತೆಗೆ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ದ್ವಿಚಕ್ರ ವಾಹನ ನಿಲ್ಲಿಸಲು ಪರ್ಯಾಯ ವ್ಯವಸ್ಥೆ ಮಾಡಿದ್ದೇವೆ. ಮರು ಡಾಂಬರಿಕರಣ ಮಾಡುವ ಸಂದರ್ಭದಲ್ಲಿ ಎಡಭಾಗದ ರಸ್ತೆ ಬದಿಯಿಂದ ಮುಂದೆ ಬಂದ ವ್ಯಾಪಾರಸ್ಥರನ್ನು ತೆರವುಗೊಳಿಸಿ ಇಂಟೆರ್ಲಾಕ್ ವ್ಯವಸ್ಥೆ ಮಾಡಿದ್ದೇವೆ. ನಮ್ಮ ತಾಲೂಕಿಗೆ ಸುಸಜ್ಜಿತ ಪರ್ಯಾಯ ಮಾರುಕಟ್ಟೆ ವ್ಯವಸ್ಥೆ ಇಲ್ಲದ ಕಾರಣ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುತಿದ್ದಾರೆ. ಇದನ್ನ ಮನಗಂಡ ನಮ್ಮ ಕೌನ್ಸಿಲ್ ಸುಮಾರು ೭೫ ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ದಿನವಹಿ ಮಾರುಕಟ್ಟೆ ನಿರ್ಮಿಸಲು ಟೆಂಡರ್ ಕರೆದಿದ್ದು ಅದು ಪೂರ್ಣಗೊಂಡ ನಂತರ ರಸ್ತೆ ಬದಿ ವ್ಯಾಪಾರವನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಮತ್ತು ವರ್ತಕರಿಗೆ ಅನುಕೂಲ ಮಾಡುವುದಾಗಿ ಆಲೂರು ಪಟ್ಟಣ ಪಂಚಾಯತ್ ಚೀಫ್ ಆಫೀಸರ್ ನಟರಾಜ್ ಹೇಳಿದರು.