ಬೇಲೂರು: ಮತದಾರರಲ್ಲಿ ಮತದಾನದ ಬಗ್ಗೆ ಜಾಗೃತಿ ನಿಟ್ಟಿನಲ್ಲಿ ತಾಲೂಕು ಸ್ವೀಪ್ ಸಮಿತಿ ಹಾಗೂ ಪುರಸಭಾ ವತಿಯಿಂದ ಪಟ್ಟಣದ ನೆಹರು ನಗರ ವೃತ್ತದಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಸಲಾಯಿತು.
ಸಹಾಯಕ ಚುನಾವಣಾಧಿಕಾರಿ ತಹಶೀಲ್ದಾರ್ ಎಂ.ಮಮತಾ ಸಹಿ ಮಾಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಮತದಾನ ಪ್ರತಿಯೊಬ್ಬ ನಾಗರಿಕನ ಹಕ್ಕು ಮತ್ತು ಕರ್ತವ್ಯ, ಅದನ್ನು ನಾಗರಿಕರು ಅರಿಯಬೇಕು. ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗದೇ ಸ್ವಯಂ ಪ್ರೇರಿತರಾಗಿ ಮತಗಟ್ಟೆಗಳಿಗೆ ತೆರಳಿ ತಪ್ಪದೇ ಮತದಾನ ಮಾಡುವುದರ ಜೊತೆಗೆ ಇತರರನ್ನು ಪ್ರೇರೇಪಿಸಿ, ಅವರು ಸಹ ಮತದಾನ ಮಾಡುವಂತೆ ನೋಡಿಕೊಳ್ಳಬೇಕು ಎಂದು ಯುವ ಜನತೆಗೆ ಕರೆ ನೀಡಿದರು.
ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷೆ ತಾ.ಪಂ ಇಒ ಸುನೀತಾ ಮಾತನಾಡಿ ಈಗಾಗಲೇ ಗ್ರಾಮೀಣ ಭಾಗ ಸೇರಿದಂತೆ ಪಟ್ಟಣದಲ್ಲಿಯೂ ಮತದಾನ ಮಾಡುವ ಕುರಿತು ಪ್ರಾತ್ಯಕ್ಷಿಕೆಯ ಮೂಲಕ ಜಾಗೃತಿಯನ್ನು ಮೂಡಿಸಲಾಗಿದೆ. ಸರಕಾರವು ಮತದಾನಕ್ಕಾಗಿ ವಿಶೇಷ ಸೌಕರ್ಯಗಳನ್ನು ಮಾಡಿದ್ದು, ಅದರ ಮೂಲಕ ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಮತದಾನ ನಡೆಯುವ ಭರವಸೆಯನ್ನು ವ್ಯಕ್ತಪಡಿಸಿ, ಮತದಾನವು ಅದ್ಭುತ ಶಕ್ತಿಯಾಗಿದ್ದು ಅದರ ಬಳಕೆಗೆ ಎಲ್ಲರೂ ಒಂದಾಗೋಣ ಎಂದು ಮನವಿ ಮಾಡಿದರು.
ಮತದಾರರು ಹೆಚ್ಚು ಮತದಾನ ಮಾಡಲು ಹಲವಾರು ಕಾರ್ಯಕ್ರಮಗಳ ಜೊತೆಗೆ ಮತದಾರರ ಜಾಗೃತಿಯನ್ನು ಗಂಭೀರವಾಗಿ ಪರಿಗಣಿಸಿರುವ ಇಲ್ಲಿಯ ಅಧಿಕಾರಿಗಳು ಉರಿಯುವ ಬಿಸಿಲಿನಲ್ಲಿಯೂ ತಹಶೀಲ್ದಾರ ಎಂ.ಮಮತಾ ಮತ್ತು ತಾ.ಪಂ ಅಧಿಕಾರಿ ಸುನೀತಾ ನೇತೃತ್ವದಲ್ಲಿ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಪ್ರತಿ ಚುನಾವಣೆಗಿಂತ ಈ ಬಾರಿ ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಮತದಾನದ ಹೆಚ್ಚಳವನ್ನು ಹೆಚ್ಚಿಸುವ ಗುರಿ ಹೊಂದಿದ್ದಾರೆ.
ಈ ಸಂದರ್ಭದಲ್ಲಿ ಪುರಸಭಾ ವ್ಯವಸ್ಥಾಪಕ ಪ್ರಶಾಂತ, ಆರೋಗ್ಯಾಧಿಕಾರಿ ಲೋಹಿತ್, ಪರಿಸರ ಅಭಿಯಂತರ ಅಧಿಕಾರಿ ಮಧುಸೂದನ, ಸಿಬ್ಬಂದಿಗಳಾದ ಪುಷ್ಪ, ಕುಮಾರ, ಸಲ್ಮಾನ್, ವಿಶ್ವ ಸೇರಿದಂತೆ ಇತರರು ಇದ್ದರು.