ಜಾವಗಲ್: ಗ್ರಾಮದ ಪ್ರಥಮ ದರ್ಜೆ ಕಾಲೇಜು ಆವರಣದಿಂದ ನಗರದ ಪ್ರಮುಖ ಬೀದಿಗಳಲ್ಲಿ ಅಂಗಡಿ ಮುಂಗಟ್ಟುಗಳಲ್ಲಿ ಮತದಾನದ ಶ್ರೇಷ್ಟತೆ ಬಗ್ಗೆ ಅರಿವಿನ ಜಾಥಾ ಕಾರ್ಯಕ್ರಮವನ್ನು ಗ್ರಾಮೀಣಾಭಿವೃದ್ಧಿ ಕಂದಾಯ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಪ್ರಥಮ ದರ್ಜೆ ವಿದ್ಯಾರ್ಥಿಗಳ ಸಂಯುಕ್ತಾಶ್ರಯದಲ್ಲಿ ನಡೆಸಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಇಓ ನಾಗರಾಜು ಮಾತನಾಡಿ, ಮತದಾನ ಅನ್ನುವುದು ಬಹುಮುಖ್ಯವಾದದ್ದು, 18 ವರ್ಷ ಮೇಲ್ಪಟ್ಟ ಎಲ್ಲರೂ ಮತದಾನ ಮಾಡಬಹುದು. ರಾಜಕೀಯ ವ್ಯಕ್ತಿಗಳ ಯಾವುದೇ ಆಮಿಷಗಳಿಗೆ ಬಲಿಯಾಗದೆ ಸ್ವ-ಇಚ್ಛೆಯಿಂದ ಮತದಾನ ಮಾಡಿ ಈ ದೇಶದ ಸಂವಿಧಾನದ ಅಶೋತ್ತರಗಳಿಗೆ ಬೆಲೆ ನೀಡುವ ವ್ಯಕ್ತಿಗೆ ಮತ ಹಾಕಲು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಅಲ್ಲದೆ 80 ವರ್ಷ ದಾಟಿದ ವೃದ್ದರು ಹಾಗೂ ಅಂಗವಿಕಲರಿಗೆ ಮನೆಯಲ್ಲೇ ಮತದಾನ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಲು ಸಾರ್ವಜನಿಕರಿಗೆ ತಿಳಿಸಿದರು.
ಉಪತಹಶೀಲ್ದಾರ ವೇಂಕಟೇಶ, ರೆವಿನ್ಯೂ ಇನ್ಸಪೇಕ್ಟರ್ ಗೋವಿಂದರಾಜು, ಪಿಡಿಓ ರವಿ ಹಾಗೂ ಡಾ. ಅಶೋಕ ಮತದಾನದ ಉಪಯುಕ್ತತೆಗಳ ಬಗ್ಗೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಎ.ಡಿ ಈಶ್ವರ್ ಬಣಕಟ್ಟೆ, ನೇರ್ಲಿಗೆ ಗ್ರಾ.ಪಂ ಪಿಡಿಓ ಉಷಾ, ಕಾರ್ಯದರ್ಶಿ ನಂದಿನಿ, ಲೆಕ್ಕ ಸಹಾಯಕ ರುದ್ರೇಶ್, ಪಂಚಾಯತಿ ಸಿಬ್ಬಂದಿಗಳು ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು, ಸ್ಥಳೀಯ ಗಾಯಕ ಸೋಮಶೇಖರ ಮೇಲುಕೋಟೆ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.