ಹಾಸನ: ಜಿಲ್ಲೆಯ ತಾಲೂಕು ಮತ್ತು ಹೋಬಳಿ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿಗಳ ಕೊರತೆ ಇದ್ದು, ರೋಗಿಗಳಿಗೆ ಸೂಕ್ತ ಚಿಕಿತ್ಸೆ ಒದಗಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘದ ಸದಸ್ಯರು ಡಿಸಿ ಕಚೇರಿ ಎದುರು ಪ್ರತಿಭಟಿಸಿದರು.
ಜಿಲ್ಲೆಯ ಎಲ್ಲಾ ತಾಲೂಕು ಮತ್ತು ಹೋಬಳಿ ಕೇಂದ್ರಗಳಲ್ಲಿ ಸರ್ಕಾರಿ ಆಸ್ಪತ್ರೆಗಳಿರುವುದು ಸರಿಯಷ್ಟೆ, ಆದರೆ ವೈದ್ಯರು ಮತ್ತು ಸಿಬ್ಬಂದಿ ಕೊರತೆ ಇದ್ದು ಒಳರೋಗಿ ಮತ್ತು ಹೊರ ರೋಗಿಗಳಿಗೆ ಸರಿಯಾದ ಚಿಕಿತ್ಸೆ ದೊರೆಯುತ್ತಿಲ್ಲ ಎಂದು ಪ್ರತಿಭಟನಾಕಾರರು ದೂರಿದರು. ಸರ್ಕಾರಿ ಆಸ್ಪತ್ರೆಗಳಿಗೆ ಹೊರಗುತ್ತಿಗೆ ಆಧಾರದ ಅಡಿ ಸಿಬ್ಬಂದಿ ನೇಮಕ ಮಾಡಲಾಗಿದೆ. ಇವರಲ್ಲಿ ಕೆಲ ಮಹಿಳೆಯರು ಆಸ್ಪತ್ರೆಯ ಒಳಗಡೆ ಚಿಕಿತ್ಸೆಗೆಂದು ಹೋದ ಒಳರೋಗಿ ಮತ್ತು ಹೊರ ರೋಗಿಗಳ ಮೇಲೆ ಏಕವಚನದಲ್ಲಿ ಮಾತನಾಡುವುದು, ಅವಾಚ್ಯ ಶಬ್ದಗಳನ್ನು ಬಳಸುತ್ತಾರೆ. ಮಾರ್ಚ್ ೨೫ರಂದು ಹಾಸನ ಸರ್ಕಾರಿ ಆಸ್ಪತ್ರೆಯ ರೂಂ ನಂ. ೨೭ರಲ್ಲಿ ಬೆಳಿಗ್ಗೆ ೧೧.೩೦ರ ವೇಳೆ ಚಿಕಿತ್ಸೆಗೆ ಬಂದಿದ್ದ. ಹೊರರೋಗಿ ವೃದ್ದನಿಗೆ ಅವಾಚ್ಯವಾಗಿ ಬೈದು ವೈದ್ಯರ ಕೊಠಡಿಯಿಂದ ಕೈಯಿಂದ ಹೊರಕ್ಕೆ ನೂಕಿ ನಿಂದಿಸಿದ್ದಾರೆ ಎಂದು ದೂರಿದರು. ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುವ ಇಂತಹವರ ಮೇಲೆ ಕಾನೂನು ಕ್ರಮ ಜರುಗಿಸಿ ಅವರುಗಳನ್ನು ಸೇವೆಯಿಂದ ತೆಗೆದು ಹಾಕಬೇಕೆಂದು ಒತ್ತಾಯಿಸಿದರು.
ಬಿಪಿಎಲ್ ಪಡಿತರ ಕಾರ್ಡುದಾರರಿಗೆ ಅರ್ಧ ಹಣವನ್ನು ಕಟ್ಟಿಸಿಕೊಳ್ಳುತ್ತಾರೆ. ಇದರಿಂದ ವಿನಾಯಿತಿ ನೀಡಬೇಕು. ಬಿಪಿಎಲ್ ಕಾರ್ಡುದಾರರಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡಬೇಕು. ಎಕ್ಸರೆ ಮತ್ತು ಎಂಆರ್‌ಐ ಸ್ಕ್ಯಾನ್, ಐ.ಸಿ.ಯು ಎಲ್ಲದ್ದಕ್ಕೂ ಬಿಪಿಎಲ್. ಕಾರ್ಡುದಾರರಿಗೆ ಕಟ್ಟಿಸಿಕೊಳ್ಳಲಾಗುತ್ತಿದ್ದು, ಬಿಪಿಎಲ್ ಕಾರ್ಡುದಾರರಿಗೆ ಜಿಲ್ಲಾದ್ಯಂತ ಇರುವ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಆನೆಕೆರೆ ರವಿ, ಜಿಲ್ಲಾಧ್ಯಕ್ಷ ಬಾಬು, ರಾಜ್ಯ ಸಂಚಾಲಕ ಮಹಮದ್ ಸಾದಿಕ್, ಕಮಲಮ್ಮ, ಜಿಲ್ಲಾ ಕಾರ್ಯದರ್ಶಿ ವಿಠಲ್, ಬೋರನಕೊಪ್ಪಲು ಜಯರಾಂ ಇತರರು ಉಪಸ್ಥಿತರಿದ್ದರು.