ಹಾಸನ: ಸರಕು ವಾಹನಗಳಿಗೆ ಕಡ್ಡಾಯ ರೆಟ್ರೋ ಸ್ಟಿಕ್ಕರ್ ಹಾಗೂ ಫಿಟ್ನೆಸ್ ಸರ್ಟಿಫಿಕೇಟ್‌ಗೆ ಕ್ಯೂಆರ್ ಕೋಡ್ ಅಳವಡಿಕೆ ವಿರೋಧಿಸಿ ಲಾರಿ ಮಾಲೀಕರ ಸಂಘದಿಂದ ಆರ್‌ಟಿಓ ಕಚೇರಿ ಎದುರು ಧರಣಿ ನಡೆಸಲಾಯಿತು.
ಈ ವೇಳೆ ಮಾತನಾಡಿದ ಸದಸ್ಯರು ಹಾಗೂ ಲಾರಿ ಮಾಲೀಕರುಗಳು ಸ್ವಯಂ ಉದ್ಯೋಗವನ್ನು ಹಲವಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದೇವೆ. ಈ ಹಿಂದೆಯೂ ಕೂಡ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡದೆ ನಾವು ಸರ್ಕಾರದ ಜೊತೆ ಕೈ ಜೋಡಿಸಿಕೊಂಡು ಜೊತೆಯಾಗಿ ನಡೆದುಕೊಂಡು ಹೋಗುತ್ತಿದ್ದೇವೆ. ಎಲ್ಲಾ ರೀತಿಯ ತೆರಿಗೆಗಳನ್ನು ಚಾಚು ತಪ್ಪದೆ ನಿಗದಿತ ಸಮಯದಲ್ಲಿ ಸರ್ಕಾರಕ್ಕೆ ತೆರಿಗೆ ಹಣವನ್ನು ಕಟ್ಟುತ್ತಿದ್ದೇವೆ.
ಆದರೆ ಇತ್ತೀಚಿನ ದಿನಗಳಲ್ಲಿ ಸರಕು ಸಾಗಾಣಿಕೆ ಉದ್ಯಮದವರ ಮೇಲೆ ಅತಿಯಾದ ತೆರಿಗೆ ಹೇರಿರುವುದರಿಂದ ಸರಕು ಸಾಗಾಣಿಕೆ ಉದ್ಯಮವು ತುಂಬ ನಷ್ಟ ಮತ್ತು ಸಂಕಷ್ಟದಲ್ಲಿ ತೊಡಗಿದೆ. ಈಗ ಸರ್ಕಾರದವರು ಯಾವುದೇ ರೀತಿಯ ಉಪಯೋಗವಿಲ್ಲದ ರೆಟ್ರೋ ಸ್ಟಿಕರ್ ಹಾಗೂ ಫಿಟ್ನೆಸ್ ಸರ್ಟಿಫಿಕೆಟ್‌ನ್ನು ಅಳವಡಿಸಲು ಆದೇಶವನ್ನು ಹೊರಡಿಸಿ ಲಾರಿಯವರ ಮೇಲೆ ಹೆಚ್ಚಿನ ಹೊರೆಯನ್ನು ಹೊರೆಸಿರುತ್ತಾರೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಹಾಸನ ಜಿಲ್ಲಾ ಲಾರಿ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಹೆಚ್.ಟಿ. ಅಣ್ಣಾಜಿ, ನಿರ್ದೆಶಕ ಎಸ್.ಡಿ.ಚಂದ್ರು, ಜಿಲ್ಲಾ ಸಣ್ಣ ಕೈಗಾರಿಕ ಸಂಘದ ಅಧ್ಯಕ್ಷ ಹೆಚ್.ಎ. ಕಿರಣ ಇತರರು ಉಪಸ್ಥಿತರಿದ್ದರು.