ಚನ್ನರಾಯಪಟ್ಟಣ: ತಾಲ್ಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದ್ದು, ಹಾಡು ಹಗಲಿನಲ್ಲಿ ಮಾರಕಾಸ್ತ್ರಗಳು ಘರ್ಜಿಸುತ್ತಿವೆ ಇದನ್ನು ತಡೆಯುವಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿ ಸ್ವಾಭಿಮಾನಿ ಸಾಮಾಜಿಕ ನ್ಯಾಯ ವೇದಿಕೆಯಿಂದ ಮಿನಿ ವಿಧಾನ ಸೌದ ಮುಂಭಾಗ ಧರಣಿ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಪುರಸಭ ಸದಸ್ಯ ಧರಣಿ ನಾಗೇಶ್ ಮಾತನಾಡಿ, ಶ್ರವಣ ಬೆಳಗೊಳಕ್ಕೆ ತೆರಳುವ ಮುಖ್ಯ ರಸ್ತೆಯಲ್ಲಿ ಬೈಕ್‌ನಲ್ಲಿ ತೆರಳುವಾಗ ವಾಹನ ಅಡ್ಡಗಟ್ಟಿ ಹಾಡು ಹಗಲಿನಲ್ಲಿ ವಿಶ್ವ ಹಿಂದೂ ಪರಿಷತ್ ತಾಲ್ಲೂಕು ಅಧ್ಯಕ್ಷ ಸಹದೇವ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದು ನೋಡಿದರೆ ಭಯದ ವಾತಾವರಣ ಸೃಷ್ಟಿಸುವ ಉದ್ದೇಶ ಇರುವುದು ಎದ್ದು ಕಾಣುತ್ತಿದೆ ಎಂದರು.
ವಿಶ್ವಕ್ಕೆ ಶಾಂತಿ ಸಂದೇಶ ಸಾರಿದ ಗೊಮ್ಮಟನ ನಾಡಿನಲ್ಲಿ ಇತ್ತೀಚಿನ ದಿವಸಗಳು ಬಿಹಾರ ರೀತಿಯ ವಾತಾವರಣ ಸೃಷ್ಟಿಯಾಗುತ್ತಿರುವುದು ನೋಡಿದರೆ ಮುಂದಿನ ದಿವಸಗಳಲ್ಲಿ ಮಹಿಳೆಯರು ಹಾಗೂ ಹೆಣ್ಣು ಮಕ್ಕಳು ರಸ್ತೆಯಲ್ಲಿ ಸಂಚಾರ ಮಾಡುವುದು ಕಷ್ಟವಾಗುವ ಲಕ್ಷಣಗಳು ಕಾಣುತ್ತಿವೆ, ಪೊಲೀಸ್ ಅಧಿಕಾರಿಗಳು ಕೈಕಟ್ಟಿ ಕೂತಿದ್ದಾರೆ, ಹಲ್ಲೆ ಮಾಡಿದ ವ್ಯಕ್ತಿಗಳನ್ನು ಬಂಧಿಸುವಲ್ಲಿ ವಿಪಲರಾಗಿದ್ದಾರೆ ಎಂದು ಆರೋಪಿಸಿದರು.
ಬೇಡಿಗನಹಳ್ಳಿ, ಮಂಜೇನಹಳ್ಳಿ ಗ್ರಾಮಕ್ಕೆ ಸೇರಿದ ಕೆರೆಯ ಮೀನು ಹಿಡಿಯಲು ಇಲಾಖೆ ಟೆಂಡರ್ ಕರೆದಿದ್ದು ಸರ್ಕಾರ ನಿಯಮಾನುಸಾರ ಪ್ರದೀಪ್‌ಗೆ ಟೆಂಡರ್ ನಿಂತಿದೆ. ಇದನ್ನು ಸಹಿಸದೆ ಕೆಲ ಕಿಡಿಗೇಡಿಗಳು ಪ್ರದೀಪ ಮೇಲೆ ಹಲ್ಲೆಗೆ ಹೋಗಿದ್ದು ಈ ವೇಳೆ ಸಹದೇವ ಮಧ್ಯ ಪ್ರವೇಶ ಮಾಡಿದ್ದರಿಂದ ಈತನನ್ನು ಗುರಿಯಾಗಿ ಇಟ್ಟುಕೊಂಡು ಈ ರೀತಿ ಕೃತ್ಯ ಎಸಗಿದ್ದಾರೆ, ಕೂಡಲೆ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಅಣತಿ ಆನಂದ ಮಾತನಾಡಿ, ಕೆರೆ ಮೀನು ಹಿಡಯುವ ವಿಷಯದಲ್ಲಿಯೂ ಶಾಸಕ ಸಿ.ಎನ್.ಬಾಲಕೃಷ್ಣ ಮೂಗು ತೂರಿಸಿದ ಪರಿಣಾಮ ಈ ರೀತಿ ಹಲವು ವೇಳೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಹಡೇನಹಳ್ಳಿ ಮಹಿಳೆಯರು ಹಲ್ಲೆ ನಡೆಯುವಾಗ ಮಧ್ಯ ಪ್ರವೇಶ ಮಾಡದೆ ಇದ್ದರೆ ಸಹದೇವರನ್ನು ಕೊಲೆ ಮಾಡುತ್ತಿದ್ದರು, ಸಹದೇವ ಪೊಲೀಸ್ ಇಲಾಖೆಗೆ ಮೊದಲೆ ಮಾಹಿತಿ ನೀಡಿದ್ದರು ಯಾವುದೇ ಪ್ರಯೋಜನವಾಗಲಿಲ್ಲ ಎಂದು ಹೇಳಿದರು.
ಮಿನಿ ವಿಧಾನ ಸೌದ ಹಣವಂತರ ಪಾಲಾಗಿದೆ, ಸರ್ಕಾರಿ ಇಲಾಖೆಗೆ ಬಡವರು ಹಾಗೂ ರೈತರು ಬರದಂತೆ ಮಾಡಲಾಗಿದೆ, ರಾಜಕಾರಣಿಗಳ ಹಿಂಬಾಲಕರಿಗೆ ಮಾತ್ರ ಸೀಮಿತವಾಗುತ್ತಿದೆ, ಇದೇ ಹಾದಿಯಲ್ಲಿ ನಡೆದರೆ ಸರ್ಕಾರದ ಟೆಂಡರ್ ಮೂಲಕ ಪಡೆದ ಕೆಲಸವನ್ನು ಮಾಡಲು ಗ್ರಾಮದಲ್ಲಿ ಬಿಡದಿದ್ದರೆ ಕಾನೂನಿಗೆ ಬೆಲೆ ಎಲ್ಲಿದೆ ಎಂದರು.
ಪುರಸಬೆ ಸದಸ್ಯರಾದ ನಂಜುಂಡಮೈಮ್, ಕೆರೆಬೀದಿ ಜಗದೀಶ್, ಬಿಜೆಪಿ ಮುಖಂಡರಾದ ಸಿ.ಆರ್. ಚಿದಾನಂದ, ನಾಗರಾಜು, ವೀಣಾ, ಲೋಕೇಶ್, ಗಿರೀಶ್, ಛಾಯಾದೇವಿ, ನಾಗೇಶ, ನಾಗೇಂದ್ರ, ರವಿ, ಹರೀಶ, ಪ್ರದೀಪ, ಶ್ರವಣ, ಚಂದ್ರಶೇಖರ, ರೂಪೇಶ ಇತರರು ಹಾಜರಿದ್ದರು.