ಬೇಲೂರು: ಮುಂದೆ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳಿಂದ ಸ್ಥಳೀಯ ನಾಯಕರಿಗೆ ಟಿಕೆಟ್ ನೀಡಬೇಕೆಂದು ಬೇಲೂರು ಪರಿವರ್ತನಾ ಸಂಘದ ಹಾಸನ ಜಿಲ್ಲಾ ಸಂಚಾಲಕ ಎನ್ ಯೋಗೇಶ್ ಹೇಳಿದರು.
ಬಸವೇಶ್ವರ್ ವೃತ್ತದ ಬಳಿ ಬೃಹತ್ ಪ್ರತಿಭಟನೆ ಹಾಗೂ ಸ್ಥಳೀಯರಿಗೆ ಟಿಕೆಟ್ ನೀಡಬೇಕೆಂಬ ಘೋಷಣೆಯೊಂದಿಗೆ ಪ್ರತಿಭಟನೆಯಲ್ಲಿ ಮಾತನಾಡಿದ ಅವರು ಈ ಬಾರಿ ಬೇಲೂರು ತಾಲೂಕಿನ ಎಲ್ಲಾ ಪಕ್ಷಗಳಲ್ಲೂ ಸ್ಥಳೀಯ ನಾಯಕರಿಗೆ ಟಿಕೆಟ್ ನೀಡಬೇಕು. ಏಕೆಂದರೆ ಸ್ಥಳೀಯ ಗ್ರಾಮೀಣ ಭಾಗದ ಸಮಸ್ಯೆ ಬಗೆಹರಿಸಲು ಹಾಗೂ ಬೇಲೂರು ತಾಲೂಕು ಮಲೆನಾಡು, ಅರೆ ಮಲೆನಾಡು ಹಾಗೂ ಬಯಲು ಸೀಮೆ ಪ್ರದೇಶದಿಂದ ಕೂಡಿದ್ದು ಸುಮಾರು 1.92ಲಕ್ಷ ಅಧಿಕ ಸ್ವಾಭಿಮಾನ ಮತದಾರ ಪ್ರಭುಗಳಿದ್ದು ಅಲ್ಲದೆ ನಮ್ಮ ತಾಲೂಕು ಪ್ರತಿಭಾವಂತ ನಾಯಕರನ್ನು ಒಳಗೊಂಡಿರುವ ಕ್ಷೇತ್ರವಾಗಿದೆ. ಈ ಹಿಂದೆ ಮೀಸಲು ಕ್ಷೇತ್ರವಾಗಿದ್ದರಿಂದ ಸುಮಾರು 15 ವರ್ಷಗಳ ಕಾಲ ಹೊರಗಿನವರೇ ಆಡಳಿತ ನಡೆಸಿದ್ದಾರೆ, ನಂತರ ಸ್ಥಳೀಯ ಶಾಸಕರು ವೈ. ಎನ್. ರುದ್ರೇಶಗೌಡರು ಎರಡು ಬಾರಿ ಅಧಿಕಾರ ನಡೆಸಿದರು. ಇಂದು ಸ್ಥಳೀಯರಾದ ಲಿಂಗೇಶ್ ಅವರು ಆಡಳಿತ ನಡೆಸುತ್ತಿದ್ದಾರೆ.
ಯಾವುದೇ ಪಕ್ಷವಾಗಲಿ ಪಕ್ಷತೀತವಾಗಿ ಸ್ಥಳೀಯ ಪ್ರಜ್ಞಾವಂತ ನಾಯಕರಿಗೆ ಟಿಕೆಟ್ ನೀಡಬೇಕು, ಅವರಿಗೆ ಇಲ್ಲಿನ ಆಳ ಅಗಲ ತಿಳಿದಿದ್ದರಿಂದ ಅವರು ಸಾರ್ವಜನಿಕರ ಸಮಸ್ಯೆಗೆ ತಕ್ಷಣ ಸ್ಪಂದಿಸುತ್ತಾರೆ. ಒಂದು ವೇಳೆ ಬೇರೆ ಊರಿನವರಿಗೆ ಟಿಕೆಟ್ ನೀಡಿದರೆ ಬೂತ್ ಮಟ್ಟದಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ಪಕ್ಷದ ನಾಯಕರಿಗೆ ಎಚ್ಚರಿಕೆ ನೀಡಿದರು.
ವಿಶ್ವಕರ್ಮ ಸಮಾಜದ ಭಾರತೀಯ ಪರಿವರ್ತನ ಸಂಘದ ತಾಲೂಕು ಉಪಾಧ್ಯಕ್ಷ ವಿಶ್ವನಾಥ ಮಾತನಾಡಿ, ಹೊರಗಿನವರು ಹಣ, ಹೆಂಡ, ಸೀರೆ ಇತರೆ ಆಮಿಷ ತೋರಿಸಿ ಮತದಾರರನ್ನು ದಾರಿ ತಪ್ಪಿಸುತ್ತಿದ್ದಾರೆ. ಅವರು ಚುನಾವಣೆ ನಡೆಯುವ ತನಕ ಮಾತ್ರ ಅವರ ದರ್ಶನ, ಗೆದ್ದರೆ ಅಥವಾ ಸೋತರೆ ಅವರನ್ನು ಹುಡುಕುವುದಕ್ಕೆ ಹರಸಾಹಾಸ ಪಡಬೇಕಾಗುತ್ತದೆ. ಅಲ್ಲದೆ ಸ್ಥಳೀಯ ಸಮಸ್ಯೆ ಅರಿತಿರದ ಅವರು ತಾಲೂಕಿನ ಜಲ್ವಂತ ಸಮಸ್ಯೆ ಬಗೆಹರಿಸಲು ಅಸಾಧ್ಯ, ನಮ್ಮ ಸಂಘಟನೆ ವತಿಯಿಂದ ತಾಲೂಕಿನ ಪ್ರತಿ ಮನೆ ಮನೆಗೂ ತೆರಳಿ ಮತದಾರರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಿದ್ದೇವೆ. ಆದ್ದರಿಂದ ಸ್ಥಳೀಯರಿಗೆ ಮಾನ್ಯತೆ ನೀಡಿ, ಎಲ್ಲಾ ರಾಜಕೀಯ ಪಕ್ಷದ ನಾಯಕರು ಅವರಿಗೆ ಟಿಕೆಟ್ ನೀಡಬೇಕೆಂದರು.
ಈ ಸಂದರ್ಭದಲ್ಲಿ ಚಂದ್ರು ಭಾರತೀಯ ಪರಿವರ್ತನ ಸಂಘದ ತಾಲೂಕು ಅಧ್ಯಕ್ಷ, ತಾಲೂಕು ಕಾರ್ಯದರ್ಶಿ ಗಿರೀಶ್, ತಾಲುಕು ಉಪಾಧ್ಯಕ್ಷ ರಾಘವೇಂದ್ರ, ಇಂದ್ರೇಶ, ಜಗದೀಶ ಇತರರು ಇದ್ದರು. ಪ್ರತಿಭಟನೆ ನಿರತ ಸಂಘವು ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ಸ್ಥಳೀಯರಿಗೆ ಟಿಕೆಟ್ ನೀಡಬೇಕೆಂದು ಘೋಷಣೆ ಕೂಗುತ್ತ ಮೆರವಣಿಗೆ ನಡೆಸಿದರು.