ಬೇಲೂರು: ಹೊರ ಗುತ್ತಿಗೆ ರದ್ದು ಮಾಡಿ, ಸರ್ಕಾರದಿಂದ ವೇತನ ನೀಡುವಂತೆ ಹಾಸನ ಜಿಲ್ಲೆ, ಬೇಲೂರು ಸರ್ಕಾರಿ ಆಸ್ಪತ್ರೆಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಭಾರತೀಯ ಮಜುಂದಾರ್ ಸಂಘದ ವತಿಯಿಂದ ಹೊರಗುತ್ತಿಗೆ ನೌಕರರು ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಿದರು.
ಇದೇ ಸಂದರ್ಭದಲ್ಲಿ ಸರ್ಕಾರಿ ಇಲಾಖೆಗಳ ಗುತ್ತಿಗೆ ನೌಕರರ ಜಿಲ್ಲಾಧ್ಯಕ್ಷ ಗೋಪಾಲ ಕೃಷ್ಣ ಮಾತನಾಡಿ, ತಾಲೂಕಿನಾದ್ಯಂತ ಸುಮಾರು ೬೫-೭೦ ಜನ ಹೊರಗುತ್ತಿಗೆ ನೌಕರರಿದ್ದು, ಸರ್ಕಾರದ ಯಾವುದೇ ಸೌಲಭ್ಯಗಳನ್ನು ಪಡೆಯುವಲ್ಲಿ ವಂಚಿತರಾಗಿದ್ದೇವೆ. ಈಗಾಗಲೆ ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರದ ಮೇಲೆ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಡ್ರೈವರ್, ಲ್ಯಾಬ್ ಟೆಕ್ನೀಷಿಯನ್ ಸೇರಿದಂತೆ ಹಲವಾರು ನೌಕರರು ಕೇವಲ ೧೦,೫೦೦ ರೂ. ವೇತನದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಗುತ್ತಿಗೆದಾರರ ನಿರ್ಲಕ್ಷ್ಯತನದಿಂದ ಸಕಾಲಕ್ಕೆ ವೇತನ ನೀಡದೆ, ನೌಕರರು ಬೀದಿಗೆ ಬೀಳುವ ಪರಿಸ್ಥಿತಿ ಎದುರಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರಿ ನೌಕರರಿಗೆ ೧೭% ವೇತನ ಸರ್ಕಾರ ಹೆಚ್ಚು ಮಾಡಿದೆ. ಆದರೆ ಹೊರ ಗುತ್ತಿಗೆ ನೌಕರರಿಗೆ ಮಾತ್ರ ಪಿ.ಎಫ್, ಇ.ಎಸ್.ಐ ಕಡಿತ ಮಾಡಿಯೂ ಕೂಡ ವೇತನ ಸರಿಯಾಗಿ ನೀಡುತ್ತಿಲ್ಲ. ಕೋವಿಡ್ ಸಂದರ್ಭದಲ್ಲಿ ೧೦.೫೦೦ ರೂ. ವೇತನ ಹೆಚ್ಚು ಮಾಡದೆ, ಜೊತೆಗೆ ಐದು ಸಾವಿರ ರೂ. ಹೆಚ್ಚಿಗೆ ಹಣ ನೀಡಬೇಕೆಂದಿದ್ದರೂ ಕೂಡ, ಯಾವ ಹಣವನ್ನು ನೌಕರರಿಗೆ ನೀಡದೆ, ಗುತ್ತಿಗೆ ನೌಕರರನ್ನು ಸರ್ಕಾರ ಕಡೆಗಣಿಸುತ್ತಿದೆ. ಆದ್ದರಿಂದ ಹೊರಗುತ್ತಿಗೆ ರದ್ದು ಮಾಡಿ, ಇಲಾಖೆ ವತಿಯಿಂದ ವೇತನ ನೀಡಬೇಕು ಅಲ್ಲಿಯವರೆಗೆ ಯಾರು ಆಸ್ಪತ್ರೆಗೆ ಬರುವುದಿಲ್ಲ ಎಂದು ಅಧ್ಯಕ್ಷ ಗೋಪಾಲಕೃಷ್ಣ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಇನ್ನೂ ಹೊರಗುತ್ತಿಗೆ ನೌಕರ ಮಹಿಳೆ ಮಂಜುಳ ಮಾತನಾಡಿ, ನಮಗೆ ಗುತ್ತಿಗೆದಾರರು ಸರಿಯಾಗಿ ಸಂಬಳ ನೀಡುತ್ತಿಲ್ಲ. ಆರು ತಿಂಗಳಿಗೊಮ್ಮೆ ವೇತನ ನೀಡಿದರೆ ಮನೆಯ ಜವಾಬ್ದಾರಿ ಹೇಗೆ ಮಾಡುವುದು, ಮನೆ ಬಾಡಿಗೆ ಮಕ್ಕಳ ವಿದ್ಯಭ್ಯಾಸದ ಗತಿ ಹೇಗೆ? ನಮಗೆ ಸರ್ಕಾರದ ವತಿಯಿಂದ ಸಂಬಳ ನೀಡುವವರೆಗೂ ಕೆಲಸ ಮಾಡುವುದಿದಲ್ಲ. ಕೂಡಲೇ ಹೊರಗುತ್ತಿಗೆ ರದ್ದು ಮಾಡುವಂತೆ ತಮ್ಮ ಅಳಲು ತೋಡಿಕೊಂಡರು.
ಆಸ್ಪತ್ರೆ ವೈದ್ಯಾಧಿಕಾರಿ ಸತೀಶ್ ಮಾತನಾಡಿ, ನಾವು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ. ನೌಕರರ ವೇತನ ಹೆಚ್ಚಿಸುವುದು ಸರ್ಕಾರಕ್ಕೆ ಬಿಟ್ಟಿದ್ದು, ಸಂಭಂದ ಪಟ್ಟ ಮೇಲಾಧಿಕಾರಿಗಳ ಗಮನಕ್ಕೆ ತರುತ್ತೇನೆಂದು ಸ್ಪಷ್ಟ ಪಡಿಸಿದರು. ಪ್ರತಿಭಟನೆಯಲ್ಲಿ ಗಣೇಶ, ಜಗದೀಶ, ಪ್ರದೀಪ, ಪವನ, ಮಹಾಲಕ್ಷ್ಮಿ, ಹೇಮ, ಸಾವಿತ್ರಮ್ಮ, ಭಾನುಮತಿ, ಗೀತಾ ಹಾಜರಿದ್ದರು.