ಹಾಸನ: ಹೇಮಾವತಿ ಜಲಾಶಯದ ಮುಳುಗಡೆ ಸಂತ್ರಸ್ತರಿಗೆ ಪೋಡಿ, ಜಮೀನು ದುರಸ್ತಿ ಮಾಡಿಕೊಡಬೇಕು ಎಂದು ಒತ್ತಾಯಿಸಿ ಹೇಮಾವತಿ ಅಣೆಕಟ್ಟಿನ ಸಂತ್ರಸ್ತರ ಹೋರಾಟ ಸಮಿತಿ ನೇತೃತ್ವದಲ್ಲಿ ಆಲೂರು ಅರಕಲ ಗೂಡು ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಇಂದು ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಹೋರಾಟ ಸಮಿತಿ ಅಧ್ಯಕ್ಷ ಎಸ್. ಕೃಷ್ಣ ಹೇಮಾವತಿ ಆಣೆಕಟ್ಟಿನಿಂದ ತಮ್ಮ ಮನೆ ಮತ್ತು ಜಮೀನನ್ನು ಕಳೆದುಕೊಂಡ ಸಂತ್ರಸ್ತರಿಗೆ ಪುನರ್ ವಸತಿ ಕಲ್ಪಿಸುವ ಸಲುವಾಗಿ ಆಲೂರು ತಾಲೂಕಿನ ಫಾರೆಸ್ಟ್ ಮತ್ತಿತರ ಸ್ಥಳಗಳಲ್ಲಿ ಜಮೀನು ಮಂಜೂರಾತಿ ಮಾಡಿಸಲಾಗಿದೆ. ಎಪ್ಪತ್ತರ ದಶಕದಲ್ಲಿ ಜಮೀನು ಮಂಜೂರು ಮಾಡಿ ಸಾಗುವಳಿ ಚೀಟಿಯನ್ನು ಮಾತ್ರ ನೀಡಲಾಗಿದೆ.
ನಮಗೆ ದುರಸ್ತಿ ಪಹಣಿ ಮತ್ತು ಖಾತೆಯನ್ನು ಇದುವರೆಗೂ ನೀಡಿರುವುದಿಲ್ಲ. ಮುಳುಗಡೆ ಸಂತ್ರಸ್ತರಿಗೆ ಮಂಜೂರು ಮಾಡಿರುವ ಜಮೀನನ್ನು ಸಾಗುವಳಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ, ಜಮೀನಿನ ಪೋಡಿ ಮಾಡದ ಕಾರಣ ಸರಕಾರದಿಂದ ಸಿಗುವ ಯಾವುದೇ ಸವಲತ್ತುಗಳು ಪಡೆಯಲು ಸಾಧ್ಯವಾಗುತ್ತಿಲ್ಲ” ಎಂದು ಆರೋಪಿಸಿದರು.
ನಮ್ಮ ಸಮಸ್ಯೆ ಕುರಿತು ಸಂಬಂಧಪಟ್ಟ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪಯೋಜನವಾಗಿಲ್ಲ. ಕಳೆದ ಡಿ. 17ರಂದು ಬಸವೇಶಪುರ ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಸಭೆಯಲ್ಲಿ ಜಿಲ್ಲಾಧಿಕಾರಿ, ಶಾಸಕರು, ತಹಶೀಲ್ದಾರರು ಮತ್ತು ಡಿಡಿಎಲ್‌ಆರ್‌ಗೆ ಈ ವಿಷಯದ ಬಗ್ಗೆ ವಿವರವಾಗಿ ವಿವರಿಸಿ ಸಂತ್ರಸ್ತರು ಒತ್ತಾಯ ಮಾಡಿದ್ದರು. ಸಂತ್ರಸ್ತರ ಮನವಿಗೆ ಅಧಿಕಾರಿಗಳು ಸಹ ಒಪ್ಪಿದ್ದರು. ಆದರೆ ಅಧಿಕಾರಿಗಳು ಇದುವರೆಗೂ ಸ್ಪಂದಿಸುತ್ತಿಲ್ಲ ಮತ್ತು ದಾಖಲೆ ಕಳೆದು ಹೋಗಿವೆ ಎಂದು ಬೇಜವಾಬ್ದಾರಿ ನೀಡುತ್ತಾರೆ ಎಂದು ದೂರಿದರು.
ಹೇಮಾವತಿ ಜಲಾಶಯ ಮುಳುಗಡೆ ಸಂತ್ರಸ್ತರ ಹಕ್ಕೊತ್ತಾಯಕ್ಕಾಗಿ ಹೇಮಾವತಿ ಜಲಾಶಯ ಸಂತಸ್ತರ ಹೋರಾಟ ಸಮಿತಿ ವತಿಯಿಂದ ಕಳೆದ ಹಲವು ವರ್ಷಗಳಿಂದ ಪ್ರತಿಭಟನೆ ನಡೆಸುತ್ತಿದ್ದರು ಯಾವುದೇ ಪ್ರಯೋಜನವಾಗಿಲ್ಲ, ಇತ್ತೀಚೆಗೆ ಸಹ ಆಲೂರು ಮತ್ತು ಅರಕಲಗೂಡು ತಹಸಿಲ್ದಾರ್ ಕಚೇರಿ ಎದುರು ಸಂತ್ರಸ್ತರಲ್ಲ ಸೇರಿ ಪ್ರತಿಭಟನೆ ನಡೆಸಿದರೂ ಕೂಡ ಸಮರ್ಪಕ ಉತ್ತರ ದೊರಕಿಲ್ಲ.
ಈಗಾಗಲೇ ಸರ್ಕಾರದಿಂದ ಸಂತ್ರಸ್ತರಿಗೆ ನೀಡಿರುವ ಜಮೀನಿನಲ್ಲಿ ಕೃಷಿಯನ್ನು ಮಾಡುತ್ತಿರುವ ಅರ್ಹರು ಪೋಡಿ ಮಾಡದ ಹಿನ್ನೆಲೆಯಲ್ಲಿ ತೀವ್ರ ತೊಂದರೆಯಾಗಿದೆ. ಸರ್ಕಾರದಿಂದಲೂ ಪೋಡಿ ಮಾಡುವಂತೆ ನಿರ್ದೇಶನ ಇದ್ದರೂ ಸಹ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳದೆ ವಿಫಲವಾಗಿದೆ.
ಆದ್ದರಿಂದ ಆದಷ್ಟು ಕೂಡಲೇ ನಮ್ಮ ಮನವಿಗೆ ಸ್ಪಂದಿಸಿ ನೂರಾರು ರೈತರ ಜಮೀನುಗಳನ್ನು ಸರ್ವೆ ಮಾಡಿಸಿ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಮಂಜೇಗೌಡ, ಮಂಜುನಾಥ ದತ್ತ, ಗಣೇಶ, ಕೃಷ್ಣ ಗೌಡ, ನಾಗೇಶ, ಮಲ್ಲೇಶ, ಮಂಜೇಶ ಸಂತ್ರಸ್ತರು ಭಾಗವಹಿಸಿದ್ದರು.