ಹಾಸನ: ಅಕ್ರಮಗಳ ತಡೆ ಹಾಗೂ ಸಾರ್ವಜನಿಕ ಆಸ್ತಿ ವಿರೂಪ ಪ್ರಕರಣಗಳ ವಿರುದ್ಧ ಕ್ರಮಕ್ಕೆ ಚುನಾವಣೆ ನೀತಿ ಸಂಹಿತೆ ಜಾರಿಗೆ ಕಾಯದೆ ಈಗಲೇ ಕಡಿವಾಣ ಹಾಕಿ ಎಂದು ರಾಜ್ಯ ಚುನಾವಣಾ ಆಯುಕ್ತ ಮನೋಜ್ ಕುಮಾರ್ ಮೀನಾ ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ.
ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು, ಪೋಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಇತರ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು ಈಗಾಗಲೇ ಇರುವ ಕಾಯಿದೆ, ನಿಯಮಗಳನ್ನು ಬಳಸಿ ಪ್ರಕರಣ ದಾಖಲಿಸಿ ಎಂದರು.
ಸಾಮೂಹಿಕವಾಗಿ ಜನರನ್ನು ಸೇರಿಸಿ ಊಟ, ಉಡುಗೊರೆ ನೀಡುವುದು, ಪಕ್ಷದ ಚಿಹ್ನೆ ಬಳಸುತ್ತಿರುವುದು, ಪೋಟೊ ಬಳಕೆ ಕಂಡು ಬಂದರೆ ಪ್ರಕರಣ ದಾಖಲಿಸಿ ಎಂದು ಮುಖ್ಯ ಚುನಾವಣಾ ಆಯುಕ್ತರು ಸೂಚನೆ ನೀಡಿದರು. ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನರ್, ಬಂಟಿಂಗ್ ಅಳವಡಿಕೆ, ಗೋಡೆ ಬರಹಗಳನ್ನು ತೆರವುಗೊಳಿಸಿ ದೈನಂದಿನ ವರದಿ ನೀಡಬೇಕು ಎಂದರು.
ಸೀರೆ, ಒಡವೆ, ಪಡಿತರ ಸಾಮಗ್ರಿ ಅಥವಾ ಇತರ ಉಡುಗೊರೆ ನೀಡುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತರೆ ಸ್ಥಳಕ್ಕೆ ಭೇಟಿ ನೀಡಿ ಖಚಿತ ಪಡಿಸಿಕೊಂಡು ಪ್ರಕರಣ ದಾಖಲಿಸಿ. ಧಾರ್ಮಿಕ ಕಾರ್ಯಕ್ರಮಕ್ಕೂ ಪಕ್ಷದ ಚಿಹ್ನೆ ಬಳಸುವ ಅಗತ್ಯ ಇರುವುದಿಲ್ಲ ಎಂದು ಮನೋಜ್ ಕುಮಾರ್ ಮೀನಾ ಹೇಳಿದರು.
ಆಮಿಷಕ್ಕೆ ಬಳಸಿದ ಸಾಮಗ್ರಿ ಜಪ್ತಿ ಮಾಡಿ ಪ್ರಕರಣ ದಾಖಲಿಸಿ ಚುನಾವಣಾ ಆಯೋಗಕ್ಕೆ ವರದಿ ಮಾಡಿ ಎಂದು ಮುಖ್ಯ ಚುನಾವಣಾ ಆಯುಕ್ತರು ತಿಳಿಸಿದರು. ಚೆಕ್ ಪೊಸ್ಟ್ ನಿರ್ಮಾಣ, ಸಿ.ಸಿ ಟಿವಿ ಅಳವಡಿಕೆ, ರಾಜ್ಯ ಹಾಗೂ ಜಿಲ್ಲೆಗಳ ಗಡಿಯಲ್ಲಿ ವಹಿಸಬೇಕಾದ ಜಾಗೃತಿ, ಅಬಕಾರಿ ಅಕ್ರಮಗಳು ತಡೆಗೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಅವರು ಸೂಚಿಸಿದರು. ಆದಾಯ ತೆರಿಗೆ ಅಧಿಕಾರಿಗಳು ಹೆಚ್ಚಿನ ಗಮನ ಹರಿಸಿ ಪರಿಶೀಲನೆ ಮಾಡಬೇಕು. ನಗದು ಸಾಗಾಣಿಕೆ ಮೇಲೆ ಸೂಕ್ಷ್ಮ ಪರಿಶೋಧನೆ ನಡೆಸಬೇಕು ಎಂದು ಮುಖ್ಯ ಚುನಾವಣಾ ಆಯುಕ್ತರು ಸೂಚಿಸಿದರು.
ಅಪರ ಮುಖ್ಯ ಚುನಾವಣಾ ಆಯುಕ್ತ ವೆಂಕಟೇಶ ಮಾತನಾಡಿ, ಸಾರ್ವಜನಿಕ ಆಸ್ತಿ ವಿರೂಪ ಪ್ರಕರಣಗಳು ನಗರ, ಪಟ್ಟಣ ಪ್ರದೇಶಗಳಲ್ಲಿ ಹೆಚ್ಚಾಗಿ ನಡೆಯುತ್ತಿದೆ. ಇದನ್ನು ತಡೆಯುವುದು ಪೌರಾಯುಕ್ತರು ಹಾಗೂ ಸ್ಥಳೀಯ ಸಂಸ್ಥೆ ಅಧಿಕಾರಿಗಳ ದೈನಂದಿನ ಕೆಲಸವಾಗಿದ್ದು, ತಕ್ಷಣ ಕ್ರಮ ವಹಿಸಿ ಎಂದರು.
ಧ್ವನಿ ವರ್ಧಕಗಳ ಅನುಮತಿ ವೇಳೆ ಗಮನ ಹರಿಸಿ ಒಳಾಂಗಣ ಹಾಗೂ ಹೊರಾಂಗಣ ಸಭೆ, ಸಮಾವೇಶಗಳಿಗೆ ಬಳಸುವ ಧ್ವನಿವರ್ಧಕಗಳ ಸಾಮರ್ಥ್ಯ ಮಿತಿಗಳ ಬಗ್ಗೆ ನಿಗಾವಹಿಸಿ ಆಮಿಷಗಳನ್ನು ಒಡ್ಡುವ ಸ್ವರೂಪದ ಔತಣಕೂಟ, ಬಾಡೂಟವನ್ನು ಮಾಡುತ್ತಿರುವ ಬಗ್ಗೆಯೂ ನಿಗಾ ವಹಸಿ, ಪ್ರದರ್ಶನ ಫಲಕ, ಪ್ರಚಾರ ಸಾಮಗ್ರಿ ಅಳವಡಿಕೆ ಬಗ್ಗೆ ಮುಂಚಿತ ಅನುಮತಿ ಪಡೆಯಲಾಗಿದೆಯೇ ಗಮನಿಸಿ ಎಂದು ವೆಂಕಟೇಶ್ ಸೂಚನೆ ನೀಡಿದರು.
ಪ್ರತಿ ಗ್ರಾಮ ಪಂಚಾಯತ್ ಹಂತದಲ್ಲಿ ಮತ ಯಂತ್ರಗಳ ಪ್ರಾತ್ಯಕ್ಷಿಕೆ ನಡೆಸಿ, ಜನರಲ್ಲಿ ಈಗಲೇ ಜಾಗೃತಿ ಮಾಡಿಸಬೇಕು ಎಂದು ಮುಖ್ಯ ಚುನಾವಣಾ ಆಯುಕ್ತರು ಸೂಚಿಸಿದರು.
ವೀಡಿಯೋ ಸಂವಾದದಲ್ಲಿ ಜಿಲ್ಲಾಧಿಕಾರಿ ಎಂ.ಎಸ್ ಅರ್ಚನಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್ ಪೂರ್ಣಿಮಾ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ, ಅಪರ ಜಿಲ್ಲಾಧಿಕಾರಿ ಆನಂದ ಮತ್ತಿತರರು ಹಾಜರಿದ್ದರು.