ಬೇಲೂರು: ತಾಲೂಕಿನ ಹಲ್ಮಿಡಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ 13 ಸ್ಥಾನಗಳ ಪೈಕಿ 11 ಸ್ಥಾನ ಅವಿರೋಧವಾಗಿ ಅಯ್ಕೆಯಾಗಿದ್ದು, ಅಧ್ಯಕ್ಷರಾಗಿ ಹೆಚ್.ಎಂ.ಪಾಲಾಕ್ಷ, ಉಪಾಧ್ಯಕ್ಷರಾಗಿ ಹೆಚ್.ಪಿ.ಮಂಜೇಗೌಡ ಹಾಗೂ ನಿರ್ದೇಶಕರಾಗಿ ಸರ್ವಶ್ರೀ ಆನಂದೇಗೌಡ, ಹೆಚ್.ಕೆ.ಶೇಷೇಗೌಡ, ಹೆಚ್.ಎಂ. ಬಸವರಾಜು, ಹೆಚ್.ಪಿ ಮಂಜೇಗೌಡ, ಹೆಚ್.ಕೆ ಕುಮಾರ್, ಹೆಚ್.ಎಲ್ ಗುರುಮಲ್ಲೇಶ್, ಹೆಚ್.ವಿ ರುದ್ರೇಗೌಡ, ಪಾಲಾಕ್ಷ, ಮಮತಾ, ಚಂದ್ರಕಲಾ, ಗೌರಮ್ಮ ಇವರು ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಜೆ.ಸಿ.ಸಾವಿತ್ರಮ್ಮ ಅಧಿಕೃತವಾಗಿ ಘೋಷಣೆ ಮಾಡಿದರು.
ಆರು ತಿಂಗಳ ಹಿಂದೆ ಸಂಘದ ವಾರ್ಷಿಕ ಸಭೆಯಲ್ಲಿ ಸಂಘದ ಕಾರ್ಯದರ್ಶಿ ವಾರ್ಷಿಕ ವರದಿಯನ್ನು ಮಂಡಿಸಿದ್ದು, ಹಾಲು ಉತ್ಪಾದಕರಿಗೆ ಸರಿಯಾಗಿ ಬಟವಾಡೆ ನೀಡಿ ಪ್ರಸಕ್ತ 2022ನೇ ಸಾಲಿನಲ್ಲಿ ರೂ 4.50 ಲಕ್ಷ ಲಾಭಗಳಿಸಿದ ಬಗ್ಗೆ ಸಭೆಗೆ ಮಂಡಿಸಲಾಗಿತ್ತು. ಈ ಲಾಭವನ್ನು ಗಮನಿಸಿದ ಅಂದಿನ ಅಧ್ಯಕ್ಷ ಹೆಚ್.ಎಂ ಗಂಗೇಗೌಡ ತಮ್ಮ ಸಂಬಂಧಿಗಳ ಮೂಲಕ ದುರುದ್ದೇಶದಿಂದ ಕಾರ್ಯದರ್ಶಿಯ ಮೇಲೆ ವಿನಾಕಾರಣ ವೃಥಾ ಆರೋಪ ಮಾಡಿ ಸುಮಾರು ಒಂದು ತಿಂಗಳ ಕಾಲ ಅಧ್ಯಕ್ಷರ ಸಂಬಂಧಿಗಳು ಡೈರಿಯಿಂದ ಕಾರ್ಯದರ್ಶಿಯನ್ನು ವಜಾಗೊಳಿಸಬೇಕು ಎಂದು ಹಾಲು ಸ್ವೀಕಾರಣೆ ವೇಳೆ ಗಲಾಟೆ ಮಾಡುತ್ತಿದ್ದರು. ಹಾಗೆಯೇ ಹಾಲಿ ಕಾರ್ಯದರ್ಶಿಯನ್ನು ಪದಚ್ಯುತಿಗೊಳಿಸಿ ಅಧ್ಯಕ್ಷರ ಮಗನನ್ನು ಕಾರ್ಯದರ್ಶಿಯನ್ನಾಗಿ ನೇಮಕದ ಹುನ್ನಾರ ನಡೆಸಿದ್ದರು. ಈ ಎಲ್ಲಾ ಅನಗತ್ಯ ಬೆಳವಣಿಗೆಯನ್ನು ಗಮನಿಸಿದ 10 ಮಂದಿ ನಿರ್ದೇಶಕರ ಪೈಕಿ ಏಳು ಮಂದಿ ನಿರ್ದೇಶಕರು ಅಧ್ಯಕ್ಷರ ವರ್ತನೆ ಖಂಡಿಸಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು. ಬಳಿಕ ಸಕಲೇಶಪುರ ಉಪ ವಿಭಾಗ ಸಹಕಾರ ಸಂಘಗಳ ಕಾಯಿದೆ ಅಡಿಯಲ್ಲಿ ಸದಸ್ಯರ ರಾಜೀನಾಮೆ ಅಂಗೀಕರಿಸಿ ಸೂಪರ್‌ಸೀಡ್ ಮಾಡಿ ಆದೇಶ ಹೊರಡಿಸಿದ್ದರು. ಬಳಿಕ ಆರು ತಿಂಗಳ ನಂತರದಲ್ಲಿ ನೂತನ ಆಡಳಿತ ಮಂಡಳಿ ರಚನೆ ಮಾಡಲು ಅನುವು ಮಾಡಿತ್ತು, ಹಾಗೆ ನೂತನ ಆಡಳಿತ ಮಂಡಳಿ ಅವಿರೋಧವಾಗಿ ಆಯ್ಕೆಯಾಗಿದ್ದು, ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ನೂತನ ಅಧ್ಯಕ್ಷ ಹೆಚ್.ಎಂ ಪಾಲಾಕ್ಷ, ನಮ್ಮ ಸಂಘದ ಕಾರ್ಯದರ್ಶಿ ಹೆಚ್.ಪಿ ಚನ್ನೇಗೌಡ ಯಾವುದೇ ಅವ್ಯವಹಾರ ನಡೆಸಿಲ್ಲ, ಹಲ್ಮಿಡಿ ಸಂಘ ಉತ್ತಮವಾಗಿ ನಡೆಯುತ್ತಿದೆ. ಇದೇ ಸಂಘದಿಂದ ನೂರಾರು ಕುಟುಂಬಗಳು ಹೈನುಗಾರಿಕೆಯಿಂದ ಬದುಕು ಕಟ್ಟಿಕೊಂಡಿದೆ. ಇಂತಹ ಸಂಘಕ್ಕೆ ನಾನು ಅಧ್ಯಕ್ಷನಾಗಿದ್ದು ನನ್ನ ಭಾಗ್ಯವೇ ಸರಿ ಎಂದು ಹರ್ಷ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಹೆಚ್.ಪಿ.ಚನ್ನೇಗೌಡ, ಗ್ರಾಮಸ್ಥರಾದ ಪಮೇಶ್ವರಪ್ಪ, ಶಿವಣ್ಣ, ಕೆಂಪೇಗೌಡ, ಗಂಗೇಗೌಡ, ಗೋವಿಂದೇಗೌಡ, ಗ್ರಾಮ ಪಂಚಾಯಿತಿ ಸದಸ್ಯರಾದ ವಿನೂದ ಸತೀಶ್, ವಸಂತ ದೇವರಾಜ ಇನ್ನು ಮುಂತಾದವರು ಹಾಜರಿದ್ದರು.