ಸಕಲೇಶಪುರ: ಪುರಸಭೆ ವಿಶೇಷ ಸಭೆಯಲ್ಲಿ ಪಟ್ಟಣದ ಅಭಿವೃದ್ಧಿ ಮತ್ತು ಸ್ವಚ್ಛ ಗ್ರಾಮ ಮಾಡಲು ಹಲವು ಕಾಮಗಾರಿಗಳನ್ನು ಕೈಗೆತ್ತಿಕೊಂಡು ಅಭಿವೃದ್ದಿ ಪಡಿಸಲು ಟೆಂಡರ್ ಕರೆಯಲು ಅನುಮೋದನೆ ನೀಡಲಾಯಿತು. ಎಲ್ಲಾ ಸದಸ್ಯರ ಅನುಮೋದನೆ ದೊರಕಿದೆ. ಸದ್ಯದಲ್ಲೇ ನಗರ ದೊಡ್ಡಮಟ್ಟದಲ್ಲಿ ಅಭಿವೃದ್ಧಿ ಆಗಲಿದೆ ಎಂದು ಪುರಸಭಾ ಅಧ್ಯಕ್ಷ ಕಾಡಪ್ಪ ಹೇಳಿದರು.
ಪುರಸಭೆ ವಿಶೇಷ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ದೊಟ್ಟಕೆರೆ ಅಭಿವೃದ್ಧಿಗೆ ಹಣ ಇಡಲು ಸದಸ್ಯ ಪ್ರಜ್ವಲ್ ಹೆಳಿದ್ದರಿಂದ, 29 ಲಕ್ಷ ರೂ. ಇಟ್ಟು, ಅದರಲ್ಲಿ ದೊಡ್ಡ ಕೆರೆ ಅಭಿವೃದ್ಧಿಪಡಿಸಿ, ಕೆರೆ ಸುತ್ತ ಚೈನ್ ಲಿಂಕ್ ಫೆನ್ಸ್, ವಾಕಿಂಗ್ ಫುಟ್‌ಪಾತ್‌ಗೆ ಅಲಂಕೃತ ದೀಪ ಅಳವಡಿಸಲು ಅನುಮೋದನೆ ಆಗಿದೆ. ತೇಜಸ್ವಿ ವೃತ್ತ ಅಭಿವೃದ್ಧಿ ಕಾಮಗಾರಿ, ಚಂಪಕನಗರ ನೀರು ಶುದ್ದೀಕರಣ ಘಟಕ ಹತ್ತಿರ ಇರುವ ಉದ್ಯಾನವನ ಅಭಿವೃದ್ಧಿ ಕಾಮಗಾರಿ, ವಾರ್ಡ್ ನಂ.8 ಮುಸ್ಲಿಂ ರುದ್ರ ಭೂಮಿಯಲ್ಲಿ ಶೆಡ್ ನಿರ್ಮಾಣ, ಚಂಪಕ ನಗರ ಜಾಗದಲ್ಲಿ ಘನತ್ಯಾಜ್ಯ ನಿರ್ವಹಣೆ, ವಾಹನ ಶೆಡ್ ಹತ್ತಿರ ಬೀದಿ ದೀಪ ಅಳವಡಿಕೆ, ನೀರು ಶುದ್ದೀಕರಣ ಘಟಕದ ಹತ್ತಿರ 1.90 ಲಕ್ಷ ಸಾಮರ್ಥ್ಯದ ನೆಲಮಟ್ಟದ ಜಲಸಂಗ್ರಹಗಾರ ನಿರ್ಮಾಣ ಕಾಮಗಾರಿ, ಹಳೇ ಬಸ್ಟ್ಯಾಂಡ್ ಹತ್ತಿರ ಫುಡ್ ಕೋರ್ಟ್ ನಿರ್ಮಾಣ ಕಾಮಗಾರಿ, ವಾರ್ಡ್ ನಂ.14ರಲ್ಲಿ ಕಾಂಕ್ರೀಟ್ ರಸ್ತೆ, ಬಾಳೆಗದ್ದೆಯಲ್ಲಿ ಬೀದಿದೀಪ, ಸರ್ಕಾರಿ ಕಾಂಪೌಂಡ್‌ಗೆ ಸುಣ್ಣ ಬಣ್ಣ ಇತ್ಯಾದಿ ಕಾಮಗಾರಿಗೆ ಅನುಮೊದನೆ ನೀಡಿದರು. ಬಾಡಿಗೆ ಹೆಚ್ಚು ಮಾಡಲು ಎಲ್ಲಾ ಸದಸ್ಯರು ವಿರೋಧ ಮಾಡಿ, ಇದುವರೆಗೆ ಹತ್ತಾರು ವರ್ಷಗಳಿಂದ ಅಂಗಡಿ ಬಾಡಿಗೆ ಕಟ್ಟದೆ ಇರುವವರ ಮೇಲೆ ಕ್ರಮ ಕೈಗೊಳ್ಳಲು ಒತ್ತಾಯಿಸಿದರು.
ಮೀನು ಮತ್ತು ಮಾಂಸದಂಗಡಿ ಹರಾಜು ಮಾಡದೆ ಎಲ್ಲೆಂದರಲ್ಲಿ ಹೈವೇ ಪಕ್ಕದಲ್ಲಿ ಮೀನು ಮಾರಾಟ ಮಾಡುತ್ತಿರುವುದರಿಂದ ಇಡೀ ಪಟ್ಟಣ ವಾಸನೆಯಿಂದ ಕೂಡಿದೆ. ಕೂಡಲೇ ಹರಾಜು ಮಾಡಿ ಸರ್ಕಾರಕ್ಕೆ ಆದಾಯ ಬರುವಂತೆ ಮಾಡಲು ನಾಮ ನಿರ್ದೇಶನ ಸದಸ್ಯ ದೀಪಕ್ ಒತ್ತಾಯಿಸಿದರು.