ಬೇಲೂರು: ಪುರಸಭೆ ಅಧಿಕಾರಿಗಳು, ನೌಕರರು ಕಾಮಗಾರಿಗಳ ಬಗ್ಗೆ ಹಾಗೂ ನಗರದ ಸ್ವಚ್ಛತೆ ಕಡೆ ಗಮನ ಹರಿಸದೆ ಸಾರ್ವಜನಿಕರು ಚುನಾಯಿತಾ ಪ್ರತಿನಿಧಿಗಳಿಗೆ ಶಾಪ ಹಾಕಲು ಕಾರಣವಾಗುತ್ತಿದ್ದಾರೆ ಅಂತಹ ನಿರ್ಲಕ್ಷ್ಯ ಕೆಲಸಗಾರರನ್ನು ತಕ್ಷಣ ತೆಗೆಯಬೇಕೆಂದು ಪುರಸಭೆ ಸದಸ್ಯ ಜಮಾಲೂದ್ದೀನ್ ಹಾಗೂ ಗಿರೀಶ ನೇರವಾಗಿ ಆರೋಪಿಸಿದರು.
ಪುರಸಭೆ ವೇಲಾಪುರಿ ಸಭಾಂಗಣದಲ್ಲಿ ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ವಿಶೇಷ ಪುರಸಭಾ ಸದಸ್ಯರ ಸಭೆಯಲ್ಲಿ ಮಾತನಾಡಿದ ಜಮಾಲ್ ಪುರಸಭೆಯಿಂದ ನಡೆಯುವ ಯಾವುದೇ ಕಾಮಗಾರಿಗಳಾಗಲಿ, ಸ್ವಚ್ಛತೆಯಾಗಲಿ ಸರಿಯಾಗಿ ನಡೆಯುತ್ತಿಲ್ಲ. ಅಲ್ಲದೆ ಸಭೆಯ ಮಾಹಿತಿಯನ್ನು ನೀಡುತ್ತಿಲ್ಲ. ಸರ್ಕಾರದ ಸುತ್ತೋಲೆಗಳನ್ನು ಸದಸ್ಯರುಗಳಿಗೆ ನೀಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಯಾವುದೇ ಮಾಹಿತಿ ನೀಡದೆ ಸಭೆಯಲ್ಲಿ ಮಂಡನೆ ಮಾಡಿದರೆ, ಅದರ ಬಗ್ಗೆ ನಾವುಗಳು ಯಾವ ರೀತಿ ಅರ್ಥ ಮಾಡಿಕೊಳ್ಳುವುದು? ಇಂತಹ ಅಧಿಕಾರಿಗಳಿಂದ, ನೌಕರರಿಂದ, ಮತ ನೀಡಿರುವ ನಮಗೆ ಮತದಾರರು ಹಿಡಿ ಶಾಪ ಹಾಕುತ್ತಿದ್ದಾರೆ, ತಕ್ಷಣ ಇಂತಹ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು. ಇದಕ್ಕೆ ರತ್ನ ಸತ್ಯನಾರಾಯಣ ಧ್ವನಿಗೂಡಿಸಿದರು.
ಫುಡ್ ಕೋರ್ಟ್ ವಿಚಾರದಲ್ಲಿ ಜಾಗದ ಸಮಸ್ಯೆ ಇರುವುದರಿಂದ ಕಾಮಗಾರಿಗಳನ್ನು ಶಾಶ್ವತ ಕಾಮಗಾರಿಯನ್ನಾಗಿ ಮಾಡಬೇಕು. ಅಲ್ಲದೆ ಬೀದಿ ಬದಿ ವ್ಯಾಪಾರಿಗಳಿಗೆ ಏಕಾ ಏಕಿ ಜಾಗವನ್ನು ಬಿಡಿಸಲು ಸಾಧ್ಯವಿಲ್ಲ. ಅವರಿಗೆ ಸೂಕ್ತ ಜಾಗ ನಿಗದಿ ಮಾಡಿ ವ್ಯಾಪಾರಿಗಳ, ಪ್ರತಿನಿದಿಗಳ ಸಭೆ ಕರೆದು ಹೇಳಬೇಕು. ಯಾವುದೇ ಮಾಹಿತಿ ನೀಡದೆ ಸುಂಕವನ್ನು ಹರಾಜು ಮಾಡಿದರೆ ಬಿಡ್ಡುದಾರ ವ್ಯಾಪಾರಿಗಳ ಮೇಲೆ ಬರೇ ಹಾಕುವ ಸಂಭವ ಇರುತ್ತದೆ. ಅವರಿಗೆ ಮೊದಲು ಜಾಗ ನಿಗದಿ ಮಾಡಬೇಕೆಂದು ಸದಸ್ಯ ಶಾಂತಕುಮಾರ್ ಹೇಳಿದರು.
ರಸ್ತೆ ಬದಿಯಲ್ಲಿರುವ ಹಣ್ಣಿನ ಗುಡಾರಗಳನ್ನು ಮೊದಲು ತೆರವುಗೊಳಿಸಿ ಅವರಿಗೆ ಮಳಿಗೆ ನಿರ್ಮಿಸಲು ಪುರಸಭೆಯ ಜಾಗ ಗುರುತಿಸಿ, ನಗರದ ಸೌಂದರ್ಯವನ್ನು ಹೆಚ್ಚಿಸುವ ಕೆಲಸವನ್ನು ಪುರಸಭೆ ಮೊದಲು ಮಾಡಬೇಕಿದೆ ಎಂದು ನಾಮಿನಿ ಸದಸ್ಯ ಎಸ್. ರವಿ ಹೇಳಿದರು. ಇದಕ್ಕೆ ಸದಸ್ಯರಾದ ಭರತ್, ಜಗದೀಶ್, ಮುಂತಾದವರು ಧ್ವನಿಗೂಡಿಸಿದರು.
ಜಗದೀಶ ಮಾತನಾಡಿ, ಪುರಸಭೆಯಲ್ಲಿ ಅಧ್ಯಕ್ಷರು ಹಾಗೂ ಅಧಿಕಾರಗಳ ನಡುವೆ ಮಾಹಿತಿ ಕೊರತಿಯಿಂದ ಯಾವುದೇ ಕಾಮಗಾರಿಗಳು ಕ್ರಮಬದ್ದವಾಗಿ ನಡೆಯಲು ಸಾಧ್ಯವಾಗುತ್ತಿಲ್ಲ. ಮೊದಲು ಮಾಹಿತಿಯನ್ನು ಸಂಗ್ರಹಿಸಿ ನಂತರ ಯಾವುದೇ ಕಾಮಗಾರಿಗಳನ್ನು ಮಾಡಿದರೆ ಸಫಲವಾಗುತ್ತಾರೆ ಎಂದರು.
ತೆರಿಗೆ ವಿಧಿಸುವ ವಿಚಾರದಲ್ಲಿ ಶಾಂತಕುಮಾರ್, ಜಮಾಲು, ಅಶೋಕರವರು, ಪುರಸಭೆ ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿಗಳ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಾಧಿಕಾರಿ ಪ್ರಶಾಂತ ಪುರಸಭೆಗೆ ಆದಾಯ ತರುವ ಕೆಲಸ ಮಾಡಬೇಕಿದೆ. ಅದು ಸರ್ಕಾರದ ಚೌಕಟ್ಟಿನಲ್ಲಿ ಮಾಡಬೇಕಿದೆ. ಪುರಸಭೆ ಆದಾಯಕ್ಕೆ ಕೊರತೆ ಮಾಡುವ ಯಾರೇ ಆದರೂ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದರು.
ಸದಸ್ಯರ ಮಾತುಗಳಿಗೆ ಅಧ್ಯಕ್ಷೆ ತೀರ್ಥಕುಮಾರಿ ಪ್ರತಿಕ್ರಿಯೆ ನೀಡಿ, ನಗರವನ್ನು ಮಾದರಿ ನಗರವನ್ನು ಮಾಡಬೇಕೆಂಬ ಸಂಕಲ್ಪ ಹೊಂದಿದ್ದು, ಅಲ್ಲದೆ ಪುರಸಭೆಗೆ ಆದಾಯ ಬರುವ ಮೂಲಗಳನ್ನು ಹುಡುಕುವ ಕೆಲಸಕ್ಕೆ ಎಲ್ಲಾ ಸದಸ್ಯರು ಕೈ ಜೋಡಿಸಬೇಕೆಂದರು.
ಇದೇ ಸಂದರ್ಭದಲ್ಲಿ, ಪುರಸಭೆಗೆ ನೂತನವಾಗಿ ಆಯ್ಕೆಯಾಗಿರುವ ಪುರಸಭೆ ಮುಖ್ಯಾಧಿಕಾರಿಯಾದ ಪ್ರಶಾಂತ ಅವರನ್ನು ಸದಸ್ಯರು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ, ಫಯಾಜ್ ಅಹಮದ್, ಪುಟ್ಟಸ್ವಾಮಿ, ಮಣಿ ಶೇಖರ್, ಅಕ್ರಮ್, ಪುರಸಭೆ ಅಧಿಕಾರಿಗಳು, ನೌಕರರು, ಇತರರು ಇದ್ದರು.