ಕೊಣನೂರು: ಬಸವ ಪಟ್ಟಣ ಪ್ರಾಥಮಿಕ ಅರೋಗ್ಯ ಕೇಂದ್ರ ಮತ್ತು ಕುಟುಂಬ ಕಲ್ಯಾಣ ಅರೋಗ್ಯ ಇಲಾಖೆ ಇವರ ಸಹಯೋಗದಲ್ಲಿ ಅಮೃತ ಅರೋಗ್ಯ ಅಭಿಯಾನ ಕಾರ್ಯಕ್ರಮವನ್ನು ಬಸವ ಪಟ್ಟಣ ಗ್ರಾಮ ಪಂಚಾಯಿತಿ ಅವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ತಿಳುವಳಿಕೆ ನೀಡಿದ ಇಲ್ಲಿನ ಅರೋಗ್ಯ ಕೇಂದ್ರದ ವೈದ್ಯಧಿಕಾರಿ ಡಾ. ಅನಿಲ್‌ಕುಮಾರ್ ಸಾಂಕ್ರಾಮಿಕವಲ್ಲದ ಕಾಯಿಲೆಗಳಿಂದ ಅಂಗಗಳ ಕಾರ್ಯ ವಿಫಲತೆ ಕಂಡು ಬರುತ್ತದೆ. ರಕ್ತದೊತ್ತಡ, ಮಧುಮೇಹ, ಬಾಲ್ಯವಿವಾಹ, ಮಾನಸಿಕ ಖಿನ್ನತೆ, ಹೆಣ್ಣು ಮಕ್ಕಳ ಹದಿಹರೆಯದ ಸಮಸ್ಯೆಗಳ ಬಗ್ಗೆ ಸಮಸ್ಯೆ ಕಂಡು ಬಂದ ತಕ್ಷಣ ಅರೋಗ್ಯ ಕೇಂದ್ರಗಳಲ್ಲಿ ಸಲಹೆ ಸಮಾಲೋಚಕರಲ್ಲಿ ಕೂಡಲೆ ಸಮಸ್ಯೆ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕು. ಯಾವುದೇ ಸಣ್ಣ ಆರೋಗ್ಯ ಸಮಸ್ಯೆಯನ್ನು ನಿರ್ಲಕ್ಷಿಸದೇ ಪರಿಹಾರ ಕಂಡುಕೊಂಡು ಉತ್ತಮ ಅರೋಗ್ಯ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು ಎಂದರು.
ತಾಲೂಕು ಹಿರಿಯ ಅರೋಗ್ಯ ನಿರೀಕ್ಷಕ ಚಂದ್ರೇಗೌಡ ಮಾತನಾಡಿ, ತಾಲೂಕಿನ ಪ್ರತಿ ಗ್ರಾಮ ಪಂಚಾಯಿತಿಗೂ ಸಾಂಕ್ರಾಮಿಕವಲ್ಲದ ರೋಗಗಳ ಪತ್ತೆ ಹಚ್ಚುವಿಕೆಗಾಗಿ ತಪಾಸಣಾ ಕಿಟ್‌ನ್ನು ನೀಡಲಾಗಿದ್ದು ಪ್ರತಿ ಗ್ರಾಮ ಪಂಚಾಯಿತಿಯು ವರ್ಷಕ್ಕೆ 4 ಬಾರಿ ಸಾರ್ವಜನಿಕರ ತಪಾಸಣೆ ಮುಂದಾಗುವಂತೆ ಅಮೃತ ಅರೋಗ್ಯ ಅಭಿಯಾನದಲ್ಲಿ ತಿಳಿಸಲಾಗಿದ್ದು, ಮಧುಮೇಹ, ರಕ್ತದೊತ್ತಡ, ದೇಹದ ತೂಕದಲ್ಲಾಗುವ ವ್ಯತ್ಯಾಸ ಸೇರಿದಂತೆ ಹದಿಹರೆಯದ ಸಮಸ್ಯೆಗೆ ಪರಿಹಾರ ಕ್ರಮಗಳ ಬಗ್ಗೆ ಗ್ರಾಮಪಂಚಾಯಿತಿ ಸಿಬ್ಬಂದಿ ಮತ್ತು ಅಶಾಕಾರ್ಯಕರ್ತೆರಿಗೆ ತರಬೇತಿ ನೀಡಲಾಗುವುದು ಎಂದರು.
ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಮಂಜುನಾಥ, ಅರೋಗ್ಯ ನಿರೀಕ್ಷಕ ಲೋಕೇಶ, ಸಹಾಯಕಿ ಪದ್ಮ, ಗ್ರಾ.ಪಂ ಸದಸ್ಯರು ಹಾಜರಿದ್ದರು.