ಅರಸೀಕೆರೆ: ನಗರದ ಜನತೆಗೆ ಕುಡಿಯುವ ನೀರು ಪೂರೈಸುವ ಜಲಸಂಗ್ರಹದ ಘಟಕದಲ್ಲಿ ಕೆಟ್ಟುಹೋಗಿದ್ದ ಫಿಲ್ಟರ್‌ಗಳ ದುರಸ್ತಿ ಕಾರ್ಯಕ್ಕೆ ಕೊನೆಗೂ ನಗರಸಭೆ ಮುಂದಾಗಿದೆ.
ನಗರದ ಹೊರವಲಯದ ಯಾದಪುರ ರಸ್ತೆಯಲ್ಲಿರುವ ಜಲ ಸಂಗ್ರಹ ಘಟಕದ ನಿರ್ವಹಣೆಯನ್ನು ನಗರಸಭೆಯೇ ನೋಡಿಕೊಳ್ಳುತ್ತಿದೆ ಆದರೆ ಘಟಕದಲ್ಲಿರುವ 27 ಫಿಲ್ಟರ್‌ಗಳಲ್ಲಿ ಬಹುತೇಕ ಫಿಲ್ಟರ್ ಗಳು ಕೆಟ್ಟು ನಿಂತು ತಿಂಗಳಾನುಗಟ್ಟಲೆ ಕಳೆದರೂ ದುರಸ್ತಿಗೆ ಕ್ರಮ ಕೈಗೊಳ್ಳದೆ ದಿನ ದೂಡುತ್ತ ಬಂದಿದ್ದರಿಂದ ಕಲುಷಿತ ಕುಡಿಯುವ ನೀರು ಪೂರೈಕೆ ಆಗುತ್ತಿದೆ ಎಂದು ಸಾರ್ವಜನಿಕರು ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಲು ಕಾರಣವಾಗಿತ್ತು. ಈ ಹಿನ್ನಲೆಯಲ್ಲಿ 15ನೇ ಹಣಕಾಸು ಯೋಜನೆಯಲಿ 2.54 ಕೋಟಿ ಅನುದಾನ ಬಿಡುಗಡೆಯಾಗಿದ್ದು ಫಿಲ್ಟರ್‌ಗಳ ದುರಸ್ತಿ ಕಾರ್ಯಕ್ಕೆ ಚಾಲನೆ ದೊರೆತಿದೆ. ನಗರಸಭೆಯ ಪ್ರಭಾರ ಅಧ್ಯಕ್ಷ ಕಾಂತೇಶ ಮತ್ತು ಸಿಬ್ಬಂದಿ ಜಲ ಸಂಗ್ರಹ ಘಟಕಕ್ಕೆ ಭೇಟಿ ನೀಡಿ ದುರಸ್ತಿ ಕಾರ್ಯವನ್ನು ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ನಗರ ಸಭೆಯ ಪ್ರಭಾರ ಅಧ್ಯಕ್ಷ ಕಾಂತೇಶ ಮಾತನಾಡಿ, ಕುಡಿಯುವ ನೀರು, ನಗರದ ಸ್ವಚ್ಛತೆ, ಬೀದಿ ದೀಪಗಳ ನಿರ್ವಹಣೆ ಹೀಗೆ ನಗರದ ಜನತೆಯ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಲು ನಗರಸಭೆ ಬದ್ಧವಾಗಿದೆ ಎಂದ ಅವರು ನಗರ ವ್ಯಾಪ್ತಿಯಲ್ಲಿ ಆಗಬೇಕಿರುವ ಸಾರ್ವಜನಿಕ ಅಭಿವೃದ್ಧಿ ಕಾಮಗಾರಿಗಳನ್ನು ಜನತೆ ನಗರ ಸಭೆಯ ಗಮನಕ್ಕೆ ತಂದರೆ ಆದ್ಯತೆ ಮೇರೆಗೆ ಕೈಗೆತ್ತಿಕೊಂಡು ಜನಪರ ಸೇವೆ ಮಾಡಲು ನಗರಸಭೆ ಸಿಬ್ಬಂದಿಗಳು ಬದ್ಧರಾಗಿದ್ದೇವೆ ಎಂದು ಭರವಸೆ ನೀಡಿದರು.
ನಗರ ಸಭೆಯ ಇಂಜಿನಿಯರ್‌ಗಳಾದ ಮೋಹನ, ಹರೀಶ, ನಗರ ಸಭೆ ಸದಸ್ಯ ಶಮಭಾನು ಟಿಪ್ಪು, ನಗರಸಭೆ ಆರೋಗ್ಯ ನಿರೀಕ್ಷಕ ರೇವಣ್ಣ ಮತ್ತು ಇತರರು ಉಪಸ್ಥಿತರಿದ್ದರು.