ಹಾಸನ: ನಗರದಲ್ಲಿ ಬೀದಿ ನಾಯಿ ಹಾವಳಿ, ಹೋಟೆಲ್, ನರ್ಸಿಂಗ್ ಹೋಮ್ ಮಾಲೀಕರಿಂದ ಕನ್ಸರ್ವೆನ್ಸಿ ಒತ್ತುವರಿ, ಯುಜಿಡಿ, ನೀರಿನ ಸಮಸ್ಯೆ, ಯೋಜನೆಗಳ ಸಮರ್ಪಕ ಅನುಷ್ಠಾನ ಮಾಡುವಲ್ಲಿ ತಾರತಮ್ಯ ಕುರಿತು ಇಂದು ನಡೆದ ನಗರ ಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರು ಆರೋಪಗಳನ್ನು ಮಾಡಿದರು.
ನಗರಸಭೆಯ ಅಧ್ಯಕ್ಷ ಮೋಹನ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ನಗರ ಸಭೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಬಹುತೇಕ ಸದಸ್ಯರು ನಗರದ 35 ವಾರ್ಡ್‌ಗಳಲ್ಲಿನ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕನ್ಸರ್ವೆನ್ಸಿಗಳ ಒತ್ತುವರಿ: ನೋಟೀಸ್ ನೀಡಲು ಆಗ್ರಹ
ನಗರದಲ್ಲಿನ ಪ್ರತಿಷ್ಠಿತ ಹೋಟೆಲ್ ಹಾಗೂ ನರ್ಸಿಂಗ್ ಹೋಮ್‌ಗಳು, ಕನ್ಸರ್ವೆನ್ಸಿಗಳನ್ನು ಒತ್ತುವರಿ ಮಾಡಿಕೊಂಡು ಕ್ಯಾಂಟೀನ್, ಸಿಟಿ ಸ್ಕ್ಯಾನ್ ಸೆಂಟರ್, ಸೇರಿದಂತೆ ತಮ್ಮ ಆಸ್ಪತ್ರೆಯ ವಾಹನಗಳ ನಿಲುಗಡೆಗೆ ಬಳಸುತ್ತಿದ್ದಾರೆ ಈ ಬಗ್ಗೆ ನಗರಸಭೆ ಗಂಭೀರ ಕ್ರಮಗಳನ್ನು ಕೈಗೊಳ್ಳುವ ಮೂಲಕ ಹೋಟೆಲ್ ಹಾಗೂ ನರ್ಸಿಂಗ್ ಹೋಮ್ ಮಾಲೀಕರಿಗೆ ನೋಟಿಸ್ ಜಾರಿ ಮಾಡುವಂತೆ ಸದಸ್ಯರೆಲ್ಲ ಒಮ್ಮತದ ತೀರ್ಮಾನ ಕೈಗೊಳ್ಳಬೇಕು ಎಂದು ಸದಸ್ಯರಾದ ಬಾಬು ಮನವಿ ಮಾಡಿದರು.
ನಗರದ ಮಲ್ಲಿಗೆ ರೆಸಿಡೆನ್ಸಿ ಎದುರಿನ ಜಾಗವನ್ನು ನಗರ ಸಭೆ ವಶಕ್ಕೆ ಪಡೆಯಬೇಕು, ಇಲ್ಲಿಯೂ ಸಹ ಹೋಟೆಲ್‌ನವರು ಪಾರ್ಕಿಂಗಿಗೆ ಬಳಸಿಕೊಳ್ಳುತ್ತಿದ್ದು ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದರು. ಈ ಎಲ್ಲಾ ವಿಚಾರಗಳನ್ನು ಸಮರ್ಪಕವಾಗಿ ಜಾರಿ ಮಾಡುವಂತೆಯೂ ಅಧ್ಯಕ್ಷರಲ್ಲಿ ಸದಸ್ಯರಾದ ಬಾಬು ಮನವಿ ಮಾಡಿದರು.
ನಮ್ಮ ವಾರ್ಡ್‌ನಲ್ಲಿ ಯುಜಿಡಿ ಸಂಪರ್ಕದ ಸಮಸ್ಯೆ ಇದೆ ಹಾಗೂ ನಗರೋತ್ಥಾನ ಯೋಜನೆ ಅಡಿ ಕಾಮಗಾರಿಗಳನ್ನು ನಮ್ಮ ವಾರ್ಡ್‌ನಲ್ಲಿ ಮಾಡಲಾಗಿಲ್ಲ ಎಂದು ವಿಜಯ ಅವರು ಸಭೆಯ ಗಮನಕ್ಕೆ ತಂದರು. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ನಗರಸಭೆಯ ಅಧ್ಯಕ್ಷ ಮೋಹನ ತಿಳಿಸಿದರು. ಈ ಸಂದರ್ಭದಲ್ಲಿ ನಗರ ಸಭೆ ಆಯುಕ್ತ ಪರಮೇಶ್ವರಪ್ಪ ಹಾಗೂ ಇತರೆ ಅಧಿಕಾರಿಗಳು ಹಾಜರಿದ್ದರು.
ಬೀದಿ ನಾಯಿ ಹಾವಳಿ ವಾರ್ಡ್‌ಗಳಲ್ಲಿ ನಾಯಿಗಳು ಹಿಂಡು ಹಿಂಡಾಗಿ ಸಂಚರಿಸುತ್ತಿದ್ದು ಇತ್ತೀಚೆಗೆ ಸತ್ತ ಹಸುವನ್ನು ನಾಯಿಗಳ ಹಿಂಡು ಕಿತ್ತು ತಿನ್ನುತ್ತಿರುವ ಬಗ್ಗೆ ನಗರಸಭೆಯ ಗಮನಕ್ಕೆ ತರಲಾಗಿತ್ತು. ಇದರಿಂದ ಸುತ್ತಮುತ್ತಲಿನ ಪರಿಸರ ಗಬ್ಬು ನಾರುತ್ತಿದ್ದು ನಾಯಿಗಳ ಹಾವಳಿ ವಿಪರೀತವಾಗಿದೆ. ರಸ್ತೆಯಲ್ಲಿ ಮಕ್ಕಳು, ವೃದ್ಧರು, ಮಹಿಳೆಯರು ಭಯದಲ್ಲಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ನಿಟ್ಟಿನಲ್ಲಿ ನಗರಸಭೆ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಧ್ವನಿಗೂಡಿಸಿದ ನಗರಸಭೆ ಸದಸ್ಯ ಗಿರೀಶ್ ಚೆನ್ನವೀರಪ್ಪ ಅವರು ನಾಯಿ ಹಾವಳಿ ನಗರದಲ್ಲಿ ಹಲವು ವರ್ಷಗಳಿಂದ ಇದೆ, ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸುವ ಮೂಲಕ ನಿಯಂತ್ರಣ ಮಾಡಬಹುದಾಗಿದೆ. ಆದರೆ ಈ ಒಂದು ಕಾರ್ಯಾಚರಣೆಗೆ ಪ್ರಾಣಿ ದಯಾ ಸಂಘದ ಸದಸ್ಯರು ಆಕ್ಷೇಪ ವ್ಯಕ್ತಪಡಿಸುತ್ತಾರೆ. ನಮ್ಮ ಮಕ್ಕಳಿಗೆ ನಾಯಿಗಳಿಂದ ಏನಾದರೂ ಪ್ರಾಣಕ್ಕೆ ತೊಂದರೆಯಾದರೆ ಮೇನಕ ಗಾಂಧಿಯು ಬರುವುದಿಲ್ಲ, ಪ್ರಾಣಿ ದಯಾ ಸಂಘದವರು ಬರುವುದಿಲ್ಲ ಎಂದು ದೂರಿದರು.
ನಂತರ ಮಾತನಾಡಿದ ಸದಸ್ಯ ಶಂಕರ್ ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡುವುದು ಸೂಕ್ತ ಆದರೆ ಇತ್ತೀಚಿನ ಕಾರ್ಯಾಚರಣೆ ವೇಳೆ ಸಾಕು ನಾಯಿಗಳಿಗೂ ಸಹ ಈ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಲೋಪವೇಸಗಳಾಗಿದೆ ಈ ಬಗ್ಗೆಯೂ ಗಮನ ಹರಿಸಬೇಕು, ಕೇವಲ ಉಪಟಳ ನೀಡುವ ಬೀದಿ ನಾಯಿಗಳನ್ನು ಹಿಡಿದು ಶಸ್ತ್ರಚಿಕಿತ್ಸೆಗೆ ಒಳಪಡಿಸಬೇಕು ಎಂದು ಮನವಿ ಮಾಡಿದರು.