ಬೇಲೂರು: ಲಯನ್ಸ್ ಕ್ಲಬ್ ಅರೇಹಳ್ಳಿ, ಸಮುದಾಯ ಆರೋಗ್ಯ ಕೇಂದ್ರ ಅರೇಹಳ್ಳಿ ಹಾಗು ಡಾ| ಎಸ್.ಆರ್ ಚಂದ್ರಶೇಖರ್ ವಾಕ್ ಮತ್ತು ಶ್ರವಣ ಸಂಸ್ಥೆ ಬೆಂಗಳೂರು ಇವರ ಸಹಯೋಗದೊಂದಿಗೆ ಲಯನ್ಸ್ ಕ್ಲಬ್ ಬೆಂಗಳೂರು ಈಸ್ಟ್ ಯೋಜನೆ ಅಡಿಯಲ್ಲಿ ಉಚಿತ ವಾಕ್ ಮತ್ತು ಶ್ರವಣ ದೋಷವಿರುವವರಿಗೆ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವನ್ನು ಅರೇ ಹಳ್ಳಿ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಲಾಗಿತ್ತು.
ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅರೇಹಳ್ಳಿ ಲಯನ್ಸ್ ಕ್ಲಬ್ ನ ಅಧ್ಯಕ್ಷ ಚಾಮರಾಜ ಮಾತನಾಡಿದರು. ವಾಕ್ ಮತ್ತು ಶ್ರವಣ ದೋಷವನ್ನು ಪ್ರಾಥಮಿಕ ಹಂತದಲ್ಲಿಯೇ ಪತ್ತೆ ಹಚ್ಚಿ ತಪಾಸಣೆ ಮಾಡಿಸಿ ಗುಣಪಡಿಸಿಕೊಳ್ಳಬೇಕು, ಇದರಿಂದ ಹೆಚ್ಚಿನ ರೀತಿಯ ಸಮಸ್ಯೆಯಾಗುವುದನ್ನು ತಪ್ಪಿಸಬಹುದು. ಇದೇ ರೀತಿ ಇವುಗಳ ದೋಷದಿಂದ ಬಳಲುತ್ತಿರುವ ನಮ್ಮ ಗ್ರಾಮದ ಹಾಗೂ ಸುತ್ತಮುತ್ತಲಿನ ಹಲವಾರು ತಪಾಸಣೆಗಾಗಿ ದೂರದ ಹಾಸನ ಅಥವಾ ಬೆಂಗಳೂರಿಗೆ ತೆರಳಲು ಆರ್ಥಿಕ ಸಂಕಷ್ಟದಿಂದ ದೂರ ಉಳಿದಿದ್ದರು. ಇವುಗಳನ್ನು ಗಮನದಲ್ಲಿ ಇಟ್ಟುಕೊಂಡು ಇದೇ ಮೊದಲ ಬಾರಿಗೆ ಅರೇಹಳ್ಳಿಯಲ್ಲಿ ಉಚಿತವಾಗಿ ವಾಕ್ ಮತ್ತು ಶ್ರವಣ ತಪಾಸಣೆ ಹಾಗು ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಂಡಿದ್ದೇವೆ ಮತ್ತು ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇರುವವರನ್ನು ಉಚಿತವಾಗಿ ಬೆಂಗಳೂರಿಗೆ ಕಳುಹಿಸಿ ಚಿಕಿತ್ಸೆ ಅಥವಾ ಅಳವಡಿಕೆ ಯಂತ್ರವನ್ನು ವಿತರಿಸಲಾಗುವುದು. ಈ ಶಿಬಿರಕ್ಕೆ ಕೊಡಗು, ಹಾಸನ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ಸುಮಾರು 150ಕ್ಕೂ ಹೆಚ್ಚು ಶಿಬಿರಾರ್ಥಿಗಳು ತಪಾಸಣೆಗಾಗಿ ಹೆಸರನ್ನು ನೋಂದಾಯಿಸಿದ್ದಾರೆ ಎಂದರು.
ಇದೇ ವೇಳೆ ಆರೋಗ್ಯಾಧಿಕಾರಿ ಡಾ. ಮಮತಾ ಮಾತನಾಡಿದರು. ಈ ಸಂದರ್ಭದಲ್ಲಿ ಠಾಣಾಧಿಕಾರಿ ಸುರೇಶ್, ಲಯನ್ಸ್ ಕ್ಲಬ್ ಪದಾಧಿಕಾರಿಗಳು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಪಂಚಾಯಿತಿ ಸದಸ್ಯರು, ಬೆಂಗಳೂರಿನ ವಾಕ್ ಮತ್ತು ಶ್ರವಣ ಸಂಸ್ಥೆಯ ಸಿಬ್ಬಂದಿಗಳು, ಗ್ರಾಮದ ಹಾಗು ಸುತ್ತಮುತ್ತಲಿನ ಶಿಬಿರಾರ್ಥಿಗಳು ಹಾಜರಿದ್ದರು.