ಬೇಲೂರು: ತಗರೆಯಲ್ಲಿರುವ ಮೀಸಲು ಅರಣ್ಯ ಪ್ರದೇಶದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಇದನ್ನು ಗಮನಿಸಿದ ಅರಣ್ಯ ಇಲಾಖೆ ಸಿಬ್ಬಂದಿ ತಕ್ಷಣ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದರು.
ಕೆಲವು ಹೊತ್ತಿನಲ್ಲಿ ಸ್ಥಳಕ್ಕೆ ಆಗಮಿಸಿದ ತಾಲೂಕಿನ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿ ಹೆಚ್ಚಿನ ರೀತಿಯ ಅಪಾಯವನ್ನು ತಡೆಗಟ್ಟಿದ್ದಾರೆ. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅರಣ್ಯಾಧಿಕಾರಿ ಎಂ.ಎಸ್. ವೇದರಾಜು ತಗರೆ ಮೀಸಲು ಅರಣ್ಯ ಪ್ರದೇಶದಲ್ಲಿ ಇದೆ ಮೊದಲ ಬಾರಿಗೆ ಈ ಪ್ರಮಾಣದ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ದಳದವರು ಸರಿಯಾದ ಸಮಯಕ್ಕೆ ಬಂದು ಸಂಪೂರ್ಣವಾಗಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ನಾನು ಸಾರ್ವಜನಿಕರಲ್ಲಿ ಮನವಿ ಮಾಡುವುದೆನೆಂದರೆ ಅರಣ್ಯ ಪ್ರದೇಶಗಳಲ್ಲಿ ವನ್ಯಜೀವಿಗಳು, ವಿವಿದ ಪ್ರಬೇಧದ ಪಕ್ಷಿಗಳು ಹಾಗು ಇತರ ಜೀವ ಜಂತುಗಳು ಗೂಡು ಕಟ್ಟಿಕೊಂಡು ಜೀವಿಸುತ್ತಿರುತ್ತವೆ ಹಾಗೂ ಔಷಧೀಯ ಗುಣಗಳಿರುವ ವಿವಿಧ ಜಾತಿಯ ಸಸ್ಯ ಮತ್ತು ಗಿಡ ಮೂಲಿಕೆಗಳು ಇರುವುದರಿಂದ ಇವುಗಳ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಹಾಗಾಗಿ ಸಾರ್ವಜನಿಕರು ಅರಣ್ಯ ಪ್ರದೇಶದ ಸುತ್ತ ಮುತ್ತ ಕಸದ ರಾಶಿಗೆ ಬೆಂಕಿ ಹಾಕುವುದರಿಂದ ಅಥವಾ ಕೆಲವರು ದಾರಿ ಮಧ್ಯೆ ಬೀಡಿ. ಸಿಗರೇಟು ಸೇದಿ ರಸ್ತೆ ಬದಿಯಲ್ಲಿ ಬಿಸಾಡುವುದರಿಂದ ಈ ರೀತಿ ಬೆಂಕಿ ಅವಘಡ ಸಂಭವಿಸಬಹುದು. ಅದರಿಂದ ಎಲ್ಲಾ ಸಾರ್ವಜನಿಕರು ಇಂತಹ ಅವಘಡ ಮರುಕಳಿಸದಂತೆ ಸಹಕರಿಸಬೇಕು ಎಂದರು.