ಆಲೂರು: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಸುಮಾರು 2 ಎಕರೆ ಬೆಳೆ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಇದರಿಂದ ರೈತ ತೀವ್ರ ನಷ್ಟಕ್ಕೀಡಾಗಿರುವ ಘಟನೆ ತಾಲೂಕಿನ ಬಾವಸವಳ್ಳಿ ಗ್ರಾಮದಲ್ಲಿ ನಡೆದಿದೆ.
ಇಂದು ಮಧ್ಯಾಹ್ನ ವಿದ್ಯುತ್ ಅವಘಡದಿಂದಾಗಿ ಬೆಂಕಿ ಹೊತ್ತಿಕೊಂಡು ರೈತ ಕುಮಾರ್ ಎಂಬವವರಿಗೆ ಸೇರಿದ ಸುಮಾರು 4 ಎಕರೆ ಜಾಗದಲ್ಲಿ 2 ಎಕರೆ ವ್ಯಾಪ್ತಿಯಲ್ಲಿ ಬೆಳೆದಿರುವ ಕಾಫಿ, ಮೆಣಸು, ಸಿಲ್ವರ್ ಮರಗಳು ಬೆಂಕಿಗಾಹುತಿಯಾಗಿವೆ. ಇದರಿಂದ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣವೇ ಜಮೀನಿನ ಮಾಲೀಕರು ಮತ್ತು ಸುತ್ತಮುತ್ತಲಿನವರು ಬೆಂಕಿ ಆರಿಸಲು ಹರಸಾಹಸ ಪಟ್ಟಿದ್ದಾರೆ. ಆದರೆ ಉರಿ ಬಿಸಿಲಿನಲ್ಲಿ ಬೆಂಕಿ ಕಾಣಿಸಿದ ಪರಿಣಾಮ ಅದರ ತೀವ್ರತೆ ಹೆಚ್ಚಾಗಿ ಲಕ್ಷಾಂತರ ಮೌಲ್ಯದ ಬೆಳೆಗಳು ಬೆಂಕಿ ಕೆನ್ನಾಲಿಗೆಗೆ ಸುಟ್ಟು ಹೋಗಿವೆ.
ತಕ್ಷಣವೇ ಹಾಸನದಲ್ಲಿರುವ ಅಗ್ನಿಶಾಮಕ ಠಾಣೆಗೆ ದೂರವಾಣಿ ಮೂಲಕ ಕರೆ ಮಾಡಿ ವಿಷಯ ತಿಳಿಸಿದರೂ ಕೂಡ ಅದು ಹಾಸನದಿಂದ ಸುಮಾರು 30 ಕಿ.ಮೀ. ದೂರದಲ್ಲಿರುವ ಗ್ರಾಮಕ್ಕೆ ಬರುವಷ್ಟರಲ್ಲಿ ಬೆಳೆಗಳು ಸುಟ್ಟು ಭಸ್ಮವಾಗಿತ್ತು. ಅಳಿದುಳಿದ ಅಲ್ಪಸ್ವಲ್ಪ ಬೆಳೆಗೆ ನೀರು ಹಾಯಿಸಲಾಯಿತು. ಇಂದು ನಡೆದ ಅಗ್ನಿ ಅವಘಡದಲ್ಲಿ ನನ್ನ 2 ಎಕರೆ ಜಾಗದಲ್ಲಿ ಸುಮಾರು 1600 ಕಾಫಿ ಗಿಡ, 400 ಸಿಲ್ವರ್ ಮರ, 400 ಮೆಣಸಿನ ಬಳ್ಳಿಗಳು ಬೆಂಕಿಗಾಹುತಿಯಾಗಿವೆ. ಇದರಿಂದ ಅಪಾರ ಪ್ರಮಾಣದ ಬೆಳೆ ನಷ್ಟ ಉಂಟಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ. ನನಗೆ ಆಗಿರುವ ನಷ್ಟಕ್ಕೆ ಸಂಬಂಧಪಟ್ಟವರು ಸೂಕ್ತ ಪರಿಹಾರ ಕೊಡಬೇಕೆಂದು ರೈತ ಬಿ.ಎಸ್.ಕುಮಾರ್ ಅಳಲು ತೋಡಿಕೊಂಡಿದ್ದಾರೆ.
ಬೇಸಿಗೆ ಸಮಯವಾಗಿರುವುದರಿಂದ ತಾಲೂಕಿನಲ್ಲಿ ಈ ರೀತಿ ಅಗ್ನಿ ಅವಘಡಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಆದ್ದರಿಂದ ಈ ಮೂರ್‍ನಾಲ್ಕು ತಿಂಗಳು ಹಾಸನದ ಒಂದು ಅಗ್ನಿಶಾಮಕ ವಾಹನ ಆಲೂರಿನಲ್ಲೇ ಇದ್ದರೆ ಸಾಕಷ್ಟು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಶಾಸಕರು ಗಮನಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಅಗ್ನಿ ಅವಘಡ ಸಂಭವಿಸಿದ ಸಂದರ್ಭದಲ್ಲಿ ಹಾಸನದಿಂದ ಬರುವಷ್ಟರಲ್ಲಿ ಸಾಕಷ್ಟು ಅನಾಹುತಗಳು ಸಂಭವಿಸಿರುತ್ತವೆ. ಆದ್ದರಿಂದ ಮುಂಜಾಗ್ರತೆಯಾಗಿ ಒಂದು ವಾಹವನ್ನು ಆಲೂರಿನಲ್ಲೇ ನಿಲುಗಡೆಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ. ಆಲೂರಿನಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಇತ್ತೀಚೆಗಷ್ಟೇ ಗುದ್ದಲಿ ಪೂಜೆ ನಡೆದಿದ್ದು, ಇದೀಗ ಕಾಮಗಾರಿ ನಿರ್ಮಾಣ ಹಂತದಲ್ಲಿದ್ದು, ಇದು ತ್ವರಿತಗತಿಯಲ್ಲಿ ಮುಗಿದು ಸಾರ್ವಜನಿಕರ ಅನುಕೂಲಕ್ಕೆ ಅವಕಾಶ ಮಾಡಿಕೊಡಬೇಕು. ಈ ನಿಟ್ಟಿನಲ್ಲಿ ಶಾಸಕರು ತೀವ್ರ ನಿಗಾ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ. ತಾಲೂಕಿನ ಬಿಕ್ಕೋಡು ರಸ್ತೆಯ ಕೋರ್ಟ್ ಸಮೀಪದಲ್ಲಿ 1.10 ಎಕರೆ ಜಾಗದ ವಿಸ್ತೀರ್ಣದಲ್ಲಿ ಅಗ್ನಿಶಾಮಕ ಠಾಣೆಯ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.