ಹಾಸನ: ಹಾಸನದ ಉದಯಗಿರಿ ಬಡಾವಣೆ ನಿವಾಸಿ ಎ.ಎನ್. ರುಕ್ಕಿಣಿಯವರು ಜಠರದ ಅಸ್ವಸ್ಥತೆ ಹಾಗೂ ಗರ್ಭಾಶಯದಲ್ಲಿನ ಫೈಬ್ರಾಯ್ಡ್ ಚಿಕಿತ್ಸೆಗಾಗಿ ಹಾಸನದ ಮಂಗಳ ಆಸ್ಪತ್ರೆಗೆ ದಾಖಲಾಗಿದ್ದು, ತಮ್ಮ ದೇಹದಲ್ಲಿನ ಸಕ್ಕರೆ ಅಂಶದ ಮಟ್ಟ ಹೆಚ್ಚಾಗಿದ್ದರೂ ಸಹಾ ಸರಿಯಾಗಿ ನಿಗಾ ವಹಿಸಿ ಪರೀಕ್ಷಿಸದೆ ಶಸ್ತ್ರಚಿಕಿತ್ಸೆ ಮಾಡಿದ ನಂತರದಲ್ಲಿ ಎಡಗೈಗೆ ಡಿಪ್ ಹಾಕಿದ್ದರ ಪರಿಣಾಮದಿಂದ ಊತ ಕಂಡು ಬಂದಿದ್ದು, ಈ ಬಗ್ಗೆ ಆಸ್ಪತ್ರೆಯ ವೈದ್ಯರಿಗೆ ತಿಳಿಸಲಾಗಿ ಮುಲಾಮು ಹಚ್ಚುವಂತೆ ಸಲಹೆ ನೀಡಿ ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಮಾಡಿರುತ್ತಾರೆ. ಚಿಕಿತ್ಸೆಗೆ ಮುನ್ನ ಮುನ್ನೆಚ್ಚರಿಕೆ ಕ್ರಮವಾಗಿ ಸರಿಯಾಗಿ ತಪಾಸಣೆ ಮಾಡದೆ ನಿರ್ಲಕ್ಷ್ಯ ಮಾಡಿ ಎಡಗೈಗೆ ಡ್ರಿಪ್ ಹಾಕಿದ್ದರ ಪರಿಣಾಮದಿಂದ ಊತ ಮತ್ತು ಗಾಯ ಉಂಟಾಗಿ ಹೆಚ್ಚಿನ ಚಿಕಿತ್ಸೆಗಾಗಿ ಅಪಾರ ಹಣ ಖರ್ಚಾಗಿರುವುದೇ ಅಲ್ಲದೆ ಎಡಕೈಗೆ ಶಾಶ್ವತನ ಉಂಟಾಗಿರುತ್ತದೆ.
ಇದಕ್ಕೆಲ್ಲಾ ಮಂಗಳಾ ಆಸ್ಪತ್ರೆಯವರ ನಿರ್ಲಕ್ಷ್ಯದಿಂದ ಆದ ಸೇವಾ ನ್ಯೂನತೆ ಕಾರಣ ಆಗಿರುತ್ತದೆ ಎಂದು ಆರೋಪಿಸಿ ಪರಿಹಾರಕ್ಕಾಗಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರದ ಆಯೋಗಕ್ಕೆ ಸಿ.ಸಿ.122/2017 ರಡಿ ದೂರನ್ನು ಸಲ್ಲಿಸಿದ್ದು ಘನ ಆಯೋಗದ ಅಧ್ಯಕ್ಷೆ ಚಂಚಲ ಸಿ.ಎಂ ಹಾಗೂ ಸದಸ್ಯರುಗಳಾದ ಹೆಚ್.ವಿ ಮಹಾದೇವ ಮತ್ತು ಅನುಪಮಾ.ಆರ್ ಇವರನ್ನೊಳಗೊಂಡ ಪೀಠವು ವಿಚಾರಣೆ ನಡೆಸಿ ಆಸ್ಪತ್ರೆಯವರ ವೈದ್ಯಕೀಯ ನಿರ್ಲಕ್ಷ್ಯದಿಂದ ಸೇವಾ ನ್ಯೂನತೆ ಉಂಟಾಗಿರುತ್ತದೆ ಎಂದು ನಿರ್ಣಯಿಸಿ 8 ಲಕ್ಷ ದಂಡ ವಿಧಿಸಿದ್ದು, ಫಿರ್ಯಾದು ದಾಖಲಿಸಿದ ದಿನಾಂಕದಿಂದ ಸಾ.ಶೇ.9% ಬಡ್ಡಿಯೊಂದಿಗೆ ಎದುರುದಾರರಾದ ಮಂಗಳ ಆಸ್ಪತ್ರೆಯವರು ಪಾವತಿಸುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರದ ಆಯೋಗ ಅಧ್ಯಕ್ಷೆ ಚಂಚಲ ಸಿ.ಎಂ ತೀರ್ಪು ನೀಡಿರುತ್ತಾರೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರದ ಆಯೋಗದ ಸಹಾಯಕ ರಿಜಿಸ್ಟ್ರಾರ್ ಮತ್ತು ಸಹಾಯಕ ಆಡಳಿತಾಧಿಕಾರಿ ತಿಳಿಸಿದ್ದಾರೆ.