ಅರಸೀಕೆರೆ: ಕೃಷಿ ಕ್ಷೇತ್ರದ ಮೇಲೆ ಸರ್ಕಾರಗಳು ಪದೇ ಪದೇ ದುಷ್ಪರಿಣಾಮ ಬೀರುವ ನಿರ್ಧಾರಗಳನ್ನು ಕೈಗೊಳ್ಳುತ್ತಿವೆ, ರೈತರನ್ನು ಒಕ್ಕಲೆಬ್ಬಿಸುವ ನಿರ್ಧಾರಗಳನ್ನು ಜಾರಿಗೆ ತರುತ್ತೇವೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ರೈತ ರತ್ನ ಕುರುಬೂರು ಶಾಂತಕುಮಾರ್ ಹೇಳಿದರು.
ಕನಕಂಚೇನಹಳ್ಳಿ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದ ಆವರಣದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಸಂಚಾಲಕ ಕನಕಂಚೇನಹಳ್ಳಿ ಪಟೇಲ್ ಪ್ರಸನ್ನ ಕುಮಾರ್ ಆಯೋಜಿಸಿದ್ದ ರೈತ ಜಾಗೃತಿ ಸಭೆಯಲ್ಲಿ ಮಾತನಾಡುತ್ತಾ ರೈತರು ಸಂಘಟಿತರಾಗದಿದ್ದರೆ ಸರ್ಕಾರಗಳು ಕೃಷಿ ಕ್ಷೇತ್ರಕ್ಕೆ ಮರಣ ಶಾಸನ ಬರೆಯುತ್ತಾರೆ, ಹಿಂದಿನ ಸರ್ಕಾರ ಎಪಿಎಂಸಿ ತಿದ್ದುಪಡಿ ಕಾಯ್ದೆ, ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಜಾರಿಗೆ ತಂದು ಖಾಸಗಿ ವ್ಯಾಪಾರಸ್ಥರಿಗೆ ಅನುಕೂಲ ಮಾಡಿ ಕೊಟ್ಟಿವೆ. ಇದರಿಂದ ರೈತರಿಗೆ ಯಾವುದೇ ಭದ್ರತೆ ಇಲ್ಲ, ರೈತರು ಮೋಸಕ್ಕೆ ಒಳಗಾದರೆ ಕಠಿಣ ಕ್ರಮ ಕೈಗೊಳ್ಳುವ ಯಾವುದೇ ಕಾನೂನು ಇಲ್ಲ, ಈಗ ನಾವು ತಿದ್ದುಪಡಿ ಕಾಯ್ದೆಗಳನ್ನು ರದ್ದು ಮಾಡಲು ಹೋರಾಟ ನಡೆಸಬೇಕಾಗಿದೆ, ಆದ್ದರಿಂದ ರೈತರು ಸಂಘಟಿತರಾಗಿ ಹೋರಾಟ ಮಾಡಿ ಸರ್ಕಾರದ ಗಮನ ಸೆಳೆಯಲು ಮುಂದಾಗಬೇಕಿದೆ. ರಾಜ್ಯಾದ್ಯಂತ ರೈತರು ಒಗ್ಗಟ್ಟಿನಿಂದ ಹೋರಾಟ ಮಾಡುವುದರಿಂದ ರೈತ ಶಕ್ತಿ ಹೆಚ್ಚುತ್ತದೆ, ಸರ್ಕಾರಗಳ ರೈತ ವಿರೋಧಿ ನೀತಿಗಳ ವಿರುದ್ಧ ನಾವು ಸಮರ ಸಾರಲು ಸಿದ್ಧರಾಗಬೇಕೆಂದು ತಿಳಿಸಿದರು.
ಸಭೆಯ ಅಧ್ಯಕ್ಷತೆಯನ್ನು ರೈತ ಸಂಘದ ರಾಜ್ಯ ಸಂಚಾಲಕ ಕನಕಂಚೇನಹಳ್ಳಿ ಪಟೇಲ್ ಪ್ರಸನ್ನ ಕುಮಾರ್ ವಹಿಸಿದ್ದರು. ಹಾಸನ, ಚಿತ್ರದುರ್ಗ, ತುಮಕೂರು, ಬೇರೆ-ಬೇರೆ ಜಿಲ್ಲೆಯ ಭಾಗದಿಂದ ಬಂದಿದ್ದ ನೂರಾರು ರೈತರು, ರೈತ ಮಹಿಳೆಯರು ಸಭೆಯಲ್ಲಿ ರೈತರ ಸಮಸ್ಯೆಗಳ ಬಗ್ಗೆ ಮುಂದಿನ ಯೋಜನೆ ರೂಪಿಸಬೇಕೆಂದು ಒತ್ತಾಯಿಸಿದರು. ಸಭೆಯಲ್ಲಿ ರಾಜ್ಯ ರೈತ ಸಂಘದ ಆಯುಬ್ ಪಾಷಾ, ಎಜಾಜ್ ಪಾಷಾ, ಮಹಮ್ಮದ್ ದಸ್ತಗಿರ್, ಹತ್ತಳ್ಳಿ ದೇವರಾಜ್, ಬರಡನಪುರ ನಾಗರಾಜ್, ರಮೇಶ್, ತಿಮ್ಮಪ್ಪ, ಹನುಮಂತ, ಶಾಂತಕುಮಾರ್, ಚಂದ್ರಣ್ಣ, ಮಮತಾ, ಪವಿತ್ರ, ಮಂಜುಳಾ ಇನ್ನಿತರರು ಇದ್ದರು.