ಹೊಳೆನರಸೀಪುರ: ಪುರಸಭೆ ಗುಂಡಿಗೆ ಬಿದ್ದು ಆಕಸ್ಮಿಕವಾಗಿ ಸಾವನ್ನಪ್ಪಿದ ಬಾಲಕ ಗಗನ್ ಸಾವಿಗೆ ಪುರಸಭೆಯ ನಿರ್ಲಕ್ಷವೇ ಕಾರಣ ಎಂದು ಕಾಂಗ್ರೆಸ್ ಮುಖಂಡ ಕೆ.ಆರ್. ಸುನೀಲ್ ಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುರಸಭಾ ವ್ಯಾಪ್ತಿಗೆ ಸಂಬಂಧಪಟ್ಟ ಮಳಿಗೆಯ ನೆಲ ಅಂತಸ್ತಿನಲ್ಲಿ ಆಧಾರ್ ಕಾರ್ಡ್ ಮಾಡಿಸಲು ಅಜ್ಜಿ ತಾತನೊಂದಿಗೆ ಬಂದಿದ್ದ ಮಗು ಗಗನ್ ಕಾಲು ಜಾರಿ ಬಿದ್ದು ಮೃತಪಟ್ಟಿದ್ದು ಈ ಸಾವಿಗೆ ಪುರಸಭೆಯ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದ್ದು ಈ ಹಿಂದೆ ಎಲ್ಲಾ ಮಾಧ್ಯಮದವರು ಇದರ ಬಗ್ಗೆ ಎಚ್ಚರಿಸಿದ್ದರು ಕೂಡ ಸ್ಪಂದಿಸದೇ ಇರುವ ಕಾರಣ ಇಂತಹ ಘಟನೆಗೆ ಕಾರಣವಾಗಿದೆ. ನೀರು ಸುಮಾರು ವರ್ಷಗಳಿಂದ ನಿಂತಿದ್ದು ಸಾರ್ವಜನಿಕರು ಆಗ್ರಹಿಸಿದರು ಕೂಡ ಪುರಸಭೆ ನಿರ್ಲಕ್ಷಿಸುತ್ತಿದೆ ಎಂದರು.
ಪುರಸಭೆಯ ಅಧಿಕಾರಿಗಳ ಕರ್ತವ್ಯ ನಿರ್ಲಕ್ಷ್ಯದಿಂದ ಆಗಿರುವ ಘಟನೆ ಎಂದು ಹೊಳೆನರಸೀಪುರ ನಗರಠಾಣೆಗೆ ದೂರು ನೀಡಲು ಹೋದಾಗ ಅಲ್ಲಿ ಸ್ಥಳೀಯ ರಾಜಕಾರಣಿಗಳ ಒತ್ತಡದಿಂದ ನನಗೆ ಉಡಾಫೆ ಉತ್ತರ ನೀಡಿದರು. ನಂತರ ಮೇಲಾಧಿಕಾರಿಗಳು ಮಾತನಾಡಿ ನಾಲ್ಕು ದಿನ ಸಮಯ ಕೇಳಿದ್ದಾರೆ. ಅವರು ಪ್ರಕರಣ ದಾಖಲಿಸದಿದ್ದಲ್ಲಿ ನ್ಯಾಯಲಯದಲ್ಲಿ ಪಿಸಿಆರ್ ಮೂಲಕ ಪುರಸಭೆಯ ಅಧಿಕಾರಿಗಳ ವಿರುದ್ದ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವುದಾಗಿ ತಿಳಿಸಿದರು.
ಸ್ಥಳೀಯ ಶಾಸಕ ರೇವಣ್ಣನವರು ಪರಸಭಾ ಆಸ್ತಿಯನ್ನು ತಮ್ಮ ಪಿತ್ರಾರ್ಜಿತ ಆಸ್ತಿಯೆಂದು ವರ್ತಿಸುತ್ತಿದ್ದಾರೆ. ಬಾಲಕ ಗಗನ್ ಸಾವಿಗೆ ಶಾಸಕರು ಕನಿಷ್ಟ ಭೇಟಿ ಮಾಡಿ ಸಾಂತ್ವನ ಹೇಳಿಲ್ಲ. ಈ ಮಗು ಸಾವಿಗೆ ನ್ಯಾಯ ಕೊಡಿಸಬೇಕೆಂದು ಎನಿಸುತ್ತಿಲ್ಲವೆ? ಇದು ನಿಮ್ಮ ಜವಾಬ್ದಾರಿ. ಶಾಸಕರೇ ತಪ್ಪು ಮಾಡುವ ಅಧಿಕಾರಿಗಳಿಗೆ ಬೆಂಬಲವಾಗಿ ನಿಂತಿರುವುದು ದುರಂತ.ಶಾಸಕರ ಆಟ ತುಂಬಾ ದಿನ ನಡೆಯಲ್ಲ ಸಾರ್ವಜನಿಕರು ಮುಂಬರುವ ಚುನಾವಣೆಯಲ್ಲಿ ಶಾಸಕರಿಗೆ ತಕ್ಕ ಪಾಠ ಕಲಿಸುತ್ತಾರೆ. ಈ ವಿಚಾರವನ್ನು ಇಲ್ಲಿಗೆ ಬಿಡದೇ ನ್ಯಾಯಾಲಯದಲ್ಲಿ ಬಾಲಕ ಗಗನ್ ಸಾವಿಗೆ ನ್ಯಾಯ ದೊರಕಿಸಿ ಕೊಡುವುದಾಗಿ ಹೇಳಿದರು.
ಕಾಂಗ್ರೆಸ್ ಸೇವಾದಳದ ರಾಜ್ಯ ಉಪಾಧ್ಯಕ್ಷ ಜಾರ್ಜ್, ಮಾಜಿ ಯುವ ಕಾಂಗ್ರೆಸ್ ಅಧ್ಯಕ್ಷ ಜಲೇಂದ್ರ, ರಂಗ ಸ್ವಾಮಿ, ನಾಗಣ್ಣ ಉಪಸ್ಥಿತರಿದ್ದರು.