ಹಾಸನ: ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಎಸ್ಕಾರ್ಟ್ ವಾಹನಕ್ಕೆ ಬೈಕ್ ಡಿಕ್ಕಿಯಾಗಿ ಸವಾರನೊಬ್ಬ ಪ್ರಾಣ ಕಳೆದುಕೊಂಡ ಘಟನೆ ಹಾಸನದಲ್ಲಿ ನಡೆದಿದೆ.
ಚಿಕ್ಕಗಂಡಸಿ ಗ್ರಾಮದ ರಮೇಶ್ (45) ಮೃತ ದುರ್ದೈವಿ. ಪೆಟ್ರೋಲ್ ಬಂಕ್‌ನಿಂದ ಬರುತ್ತಿದ್ದ ಎಸ್ಕಾರ್ಟ್ ವಾಹನಕ್ಕೆ ಬೈಕ್ ಅಡ್ಡ ಬಂದ ಪರಿಣಾಮ ದುರ್ಘಟನೆ ಸಂಭವಿಸಿದೆ.
ಆರಗ ಜ್ಞಾನೇಂದ್ರ ಅವರು ಮಲೆಮಹದೇಶ್ವರ ಬೆಟ್ಟದಿಂದ ಸ್ವಗ್ರಾಮಕ್ಕೆ ತೆರಳುತ್ತಿದ್ದರು. ಗೃಹ ಸಚಿವರಿಗೆ ಡಿಆರ್ ಇನ್ಸ್ ಪೆಕ್ಟರ್ ರಾಮು ಎಸ್ಕಾರ್ಟ್ ಮಾಡುತ್ತಿದ್ದರು. ಅಪಘಾತದ ವಿಷಯ ತಿಳಿದ ಗೃಹ ಸಚಿವ ಆರಗ ಜ್ಞಾನೇಂದ್ರ ವಾಹನ ನಿಲ್ಲಿಸದೆ ತೆರಳಿದ್ದು ಸ್ಥಳೀಯ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸ್ಥಳಕ್ಕೆ ಅರಸೀಕೆರೆ ತಾಲೂಕಿನ ಗಂಡಸಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ ಮೃತದೇಹವನ್ನ ಸ್ಥಳೀಯ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ.